ಅಗತ್ಯವಾದರೆ ಕೃಷಿ ಕಾಯ್ದೆಗಳನ್ನು ಮತ್ತೆ ತರಬಹುದು: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

ಹೊಸದಿಲ್ಲಿ, ನ. 21: ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಒಂದು ದಿನದ ಬಳಿಕ ಉನ್ನಾವೊದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ಅಗತ್ಯವಾದರೆ ಕೃಷಿ ಕಾಯ್ದೆಗಳನ್ನು ಮತ್ತೆ ತರಬಹುದು ಎಂದಿದ್ದಾರೆ.
ಉನ್ನಾವೊಂದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಾಕ್ಷಿ ಮಹಾರಾಜ್,
‘‘ಮಸೂದೆಯನ್ನು ರೂಪಿಸಲಾಗುತ್ತದೆ ಹಾಗೂ ರದ್ದುಗೊಳಿಸಲಾಗುತ್ತದೆ. ಅವುಗಳು ಮತ್ತೆ ಬರಲಿವೆ ಹಾಗೂ ಮತ್ತೆ ರೂಪಿಸಲಾಗುವುದು. ಅದು ಯಾವುದೇ ಸಂದರ್ಭದಲ್ಲಿ ನಡೆಯಬಹುದಾಗಿದೆ’’ ಎಂದಿದ್ದಾರೆ.
‘‘ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ವಿಶಾಲ ಹೃದಯಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಕಾನೂನಿನ ಬದಲು ದೇಶವನ್ನು ಆಯ್ಕೆ ಮಾಡಿದರು. ಯಾರ ಉದ್ದೇಶ ತಪ್ಪಾಗಿದೆಯೋ, ಯಾರು ಪಾಕಿಸ್ತಾನ ಜಿಂದಾಬಾದ್ ಹಾಗೂ ಖಲಿಸ್ತಾನ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದ್ದಾರೊ, ಅವರು ಸೂಕ್ತ ಉತ್ತರ ಪಡೆದಿದ್ದಾರೆ’’ ಎಂದು ಅವರು ಹೇಳಿದರು.
ಉತ್ತರಪ್ರದೇಶದ ವಿಧಾನ ಸಭೆ ಚುನಾವಣೆ ಹಾಗೂ ಕೃಷಿ ಕಾಯ್ದೆಗಳ ಹಿಂಪಡೆಯುವ ಘೋಷಣೆ ನಡುವೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು. ‘‘2022ರಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ 300ಕ್ಕಿಂತ ಅಧಿಕ ಸ್ಥಾನಗಳನ್ನು ಪಡೆಯಲಿದೆ. ಭಾರತದಲ್ಲಿ ಮೋದಿ (ಪ್ರಧಾನ ಮಂತ್ರಿ) ಹಾಗೂ ಯೋಗಿ ಆದಿತ್ಯನಾಥ್ (ಉ.ಪ್ರ. ಮುಖ್ಯಮಂತ್ರಿ)ಗೆ ಪರ್ಯಾಯ ಇಲ್ಲ’’ ಎಂದು ಅವರು ಹೇಳಿದರು.
ಇದೇ ರೀತಿ ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು, ಅಗತ್ಯವಾದರೆ ಕೃಷಿ ಕಾಯ್ದೆಗಳನ್ನು ಮತ್ತೆ ತರಬಹುದು ಎಂದು ಪ್ರತಿಪಾದಿಸಿದ್ದಾರೆ.
ಈ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷ ಹಿಂದಿಯಲ್ಲಿ ಟ್ವೀಟ್ ಮಾಡಿ, ‘‘ಅವರ ಮನಸ್ಸು ಸ್ವಚ್ಛವಾಗಿಲ್ಲ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಚುನಾವಣೆಯ ನಂತರ ಮಸೂದೆಯನ್ನು ಮತ್ತೆ ತರಲಿದ್ದಾರೆ. ಸಾಂವಿಧಾನಿಕ ಹುದ್ದೆಯನ್ನು ಆಕ್ರಮಿಸಿಕೊಂಡಿರುವ ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಹಾಗೂ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕೃಷಿ ಕಾಯ್ದೆಗಳನ್ನು ಬಿಜೆಪಿ ಮತ್ತೆ ತರಲಿದೆ ಎಂದು ಹೇಳಿದ್ದಾರೆ’’ ಎಂದಿದೆ.







