ನವೆಂಬರ್ 29ರಂದು ಸಂಸತ್ ಚಲೋ: ಸಂಯುಕ್ತ ಕಿಸಾನ್ ಮೋರ್ಚಾದ ಸಭೆಯಲ್ಲಿ ನಿರ್ಧಾರ

Photo: PTI
ಹೊಸದಿಲ್ಲಿ, ನ. 21: ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರವಿವಾರ ಸಿಂಘು ಗಡಿಯಲ್ಲಿ ಸಭೆ ನಡೆಸಿದೆ ಹಾಗೂ ಚಳಿಗಾಲದ ಅಧಿವೇಶನದ ಸಂದರ್ಭ ನವೆಂಬರ್ 29ರಂದು ಸಂಸತ್ತಿಗೆ ರ್ಯಾಲಿ ಸೇರಿದಂತೆ ಮುಂದಿನ ಸರಣಿ ಕಾರ್ಯಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ.
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಬಳಿಕ ತಮ್ಮ ಮೊದಲ ಸಭೆಯಲ್ಲಿ ರೈತ ನಾಯಕರು ಈಡೇರಿಸದೆ ಬಾಕಿ ಇರುವ ಬೇಡಿಕೆಗಳು, ಅತಿ ಮುಖ್ಯವಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕೇಂದ್ರ ಕಾಯ್ದೆಯ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ರವಾನಿಸಲು ನಿರ್ಧರಿಸಿದ್ದಾರೆ.
ಕಳೆದ ಒಂದು ವರ್ಷಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದು ಪ್ರಧಾನಿ ಅವರು ಘೋಷಣೆ ಮಾಡಿದ ಹೊರತಾಗಿಯೂ ಕಾಯ್ದೆಯನ್ನು ಅಧಿಕೃತವಾಗಿ ಹಿಂಪಡೆಯುವ ವರೆಗೆ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತರು ಪ್ರತಿಪಾದಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಕಾನೂನು ಅಲ್ಲದೆ, ಕಳೆದ ಒಂದು ವರ್ಷದಲ್ಲಿ ಹಲವರ ವಿರುದ್ಧ ದಾಖಲಿಸಲಾದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವಂತೆ ಕೂಡ ಅವರು ಆಗ್ರಹಿಸಿದ್ದಾರೆ.
ಲಕ್ನೋದಲ್ಲಿ ಸೋಮವಾರ ಕಿಸಾನ್ ಪಂಚಾಯತ್ ನಡೆಸಲಾಗುವುದು, ಬ್ರಿಟೀಶ್ ಭಾರತದ ಪ್ರಮುಖ ರಾಜಕಾರಣಿ ಸರ್ ಛೋಟು ರಾಮ್ ಅವರ ಜನ್ಮ ದಿನವಾದ ನವೆಂಬರ್ 24ರಂದು ಕಿಸಾನ್ ಮಜ್ದೂರ್ ಸಂಘರ್ಷ ದಿವಸ್ ಆಗಿ ಆಚರಿಸಲಾಗುವುದು, ನವೆಂಬರ್ 26ರಂದು ದಿಲ್ಲಿ ಗಡಿಗೆ ರ್ಯಾಲಿ ನಡೆಸಲಾಗುವುದು ಹಾಗೂ ನವೆಂಬರ್ 29ರಂದು ಸಂಸತ್ತಿಗೆ ರ್ಯಾಲಿ ಆಯೋಜಿಸಲಾಗುವುದು ಎಂದು ಎಸ್ಕೆಎಂ ರವಿವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಪರಿಸ್ಥಿತಿ ಅವಲೋಕಿಸಲು ಎಸ್ಕೆಎಂ ನವೆಂಬರ್ 27ರಂದು ಇನ್ನೊಂದು ಸಭೆಗೆ ಕರೆ ನೀಡಿದೆ. ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಹಣಕಾಸಿನ ಬೆಂಬಲ ನೀಡುವ ತೆಲಂಗಾಣ ಸರಕಾರದ ನಿರ್ಧಾರವನ್ನು ರವಿವಾರ ನಡೆದ ಸಭೆಯಲ್ಲಿ ಎಸ್ಕೆಎಂ ಪ್ರಶಂಸಿಸಿದೆ.
‘‘ಸುಮಾರು 700 ಕೆಚ್ಚೆದೆಯ ರೈತರು ಮಾಡಿದ ಭಾರೀ ಮತ್ತು ತಪ್ಪಿಸಬಹುದಾಗಿದ್ದ ಬಲಿದಾನವನ್ನು ನರೇಂದ್ರ ಮೋದಿ ಅಥವಾ ಅವರ ಸರಕಾರ ಒಪ್ಪಿಕೊಳ್ಳುತ್ತಿಲ್ಲ’’ ಎಂದು ಅದು ಹೇಳಿದೆ. ಸರಕಾರದ ತಪಸ್ಸಿನಲ್ಲೆ ಕೆಲವು ಕೊರತೆ ಇರಬಹುದು. ಆದುದರಿಂದ ಕೆಲವು ರೈತರಿಗೆ ಕೃಷಿ ಕಾಯ್ದೆಗಳ ಕುರಿತ ಸತ್ಯವನ್ನು ವಿವರಿಸಲು ಸಾಧ್ಯವಾಗಲಿಲ್ಲ ಎಂಬ ಪ್ರಧಾನಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಸ್ಕೆಎಂ, ನಂಬಿಕೆಯೊಂದಿಗೆ ನಿಜವಾದ ತಪಸ್ಸು ಮಾಡಿದವರು ಪ್ರತಿಭಟನೆ ನಡೆಸಿದ ರೈತರು ಎಂದು ಹೇಳಿದೆ.
‘‘ಈ ಅನ್ನದಾತರು ಚಾರಿತ್ರಿಕ ಚಳುವಳಿಯನ್ನು ತಮ್ಮ ತಪಸ್ಸಿನಿಂದ ಮೊದಲ ಚಾರಿತ್ರಿಕ ಯಶಸ್ಸಿನ ತುತ್ತು ತುದಿಗೆ ಕೊಂಡೊಯ್ದಿದ್ದಾರೆ ಹಾಗೂ ಇದನ್ನು ಸ್ಥಿರವಾಗಿ ಸಂಪೂರ್ಣ ಯಶಸ್ಸಿನತ್ತ ಕೊಂಡಯ್ಯಲಿದ್ದಾರೆ. ಅದು ನಿಜವಾಗಿ ಪ್ರಜಾಪ್ರಭುತ್ವದ ವಿಜಯ ಕೂಡ ಆಗಿರಲಿದೆ. ಈ ಜಯ ಕೆಲವರ ಹೆಮ್ಮೆ ಅಥವಾ ಅಹಂನ ಪ್ರಶ್ನೆ ಆಗಿರುವುದಿಲ್ಲ. ಬದಲಾಗಿ ಲಕ್ಷಾಂತರ ನಿರ್ಲಕ್ಷಿತ ಹಾಗೂ ದುರ್ಬಲ ಭಾರತೀಯರ ಜೀವನ ಹಾಗೂ ಜೀವನೋಪಾಯದ ವಿಷಯವಾಗಿರಲಿದೆ’’ ಎಂದು ಎಸ್ಕೆಎಂ ಹೇಳಿದೆ.