ಇರಾನ್ ವಾಯುಯಾನಸಂಸ್ಥೆ ‘ಮಹಾನ್ ಏರ್’ಗೆ ಸೈಬರ್ ದಾಳಿ
ಟೆಹರಾನ್, ನ.21: ತನ್ನ ಕಂಪ್ಯೂಟರ್ ವ್ಯವಸ್ಥೆಯು ಸೈಬರ್ ದಾಳಿಗೆ ಒಳಗಾಗಿರುವುದಾಗಿ ಇರಾನ್ನ ಎರಡನೆ ಬೃಹತ್ ವಾಯುಯಾನ ಸಂಸ್ಥೆಯಾದ ‘ಮಹಾನ್ ಏರ್’ ರವಿವಾರ ಬಹಿರಂಗಪಡಿಸಿದೆ. ‘‘ಮಹಾನ್ ಏರ್ ನ ಕಂಪ್ಯೂಟರ್ ವ್ಯವಸ್ಥೆಯು ಹೊಸ ದಾಳಿಯಿಂದ ಬಾಧಿತವಾಗಿದೆ’’ ಎಂದು ಕಂಪೆನಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ದೇಶದ ವಾಯುಯಾನ ಉದ್ಯಮದಲ್ಲಿ ಮಹಾನ್ ಏರ್ ಪ್ರಮುಖ ಸ್ಥಾನವನ್ನು ಹೊಂದಿರುವ ಕಾರಣದಿಂದಾಗಿ ಹಲವಾರು ಸಂದರ್ಭಗಳಲ್ಲಿ ಅದು ಸೈಬರ್ ದಾಳಿಗೆ ತುತ್ತಾಗಿದೆ ಎಂದ ಹೇಳಿಕೆ ತಿಳಿಸಿದೆ.
ಸೈಬರ್ ದಾಳಿಯ ಕಾರಣದಿಂದಾಗಿ ಕಂಪೆನಿಯ ವೆಬ್ಸೈಟ್ನ ಸುಗಮ ಕಾರ್ಯನಿರ್ವಹಣೆಗೆ ಧಕ್ಕೆಯಾಗಿದೆಯಾದರೂ, ಎಲ್ಲ ವಿಮಾನಗಳು ನಿಗದಿತ ವೇಳಾಪಟ್ಟಿಯಂತೆ ಕಾರ್ಯಾಚರಿಸುತ್ತಿವ ಎಂದು ಮಹಾನ್ ಏರ್ ಹೇಳಿಕೆಯಲ್ಲಿ ತಿಳಿಸಿದೆ. ‘ನಮ್ಮ ಅಂತರ್ಜಾಲ ಭದ್ರತಾ ತಂಡವು ಸೈಬರ್ ದಾಳಿಯನ್ನು ತಡೆಗಟ್ಟುತ್ತಿದೆ’’ ಎಂದು ಕಂಪೆನಿಯ ವಕ್ತಾರ ಆಮಿರ್ ಹೊಸೈನ್ ರೊಲಾನ್ವರಿ ರಾಷ್ಟ್ರೀಯ ಟಿವಿ ವಾಹಿನಿಗೆ ತಿಳಿಸಿದ್ದಾರೆ.
ಮಹಾನ್ ಏರ್ ಇರಾನ್ ನ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಯಾಗಿದ್ದು, ರಾಷ್ಟ್ರೀಯ ವಾಯುಯಾನ ಸಂಸ್ಥೆಯಾದ ಇರಾನ್ ಏರ್ನ ಆನಂತರ ಎರಡನೆ ದೊಡ್ಡ ವಾಯುಯಾನ ಸಂಸ್ಥೆಯಾಗಿದೆ. 2011ರಿಂದ ಅಮೆರಿಕದ ನಿರ್ಬಂಧಕ್ಕೊಳಗಾಗಿರು ಇರಾನಿ ಕಂಪೆನಿಗಳ ಕಪ್ಪುಪಟ್ಟಿಯಲ್ಲಿ ಮಹಾನ್ ಏರ್ ಕೂಡಾ ಸೇರ್ಪಡೆಯಾಗಿದೆ. ಮಹಾನ್ ಏರ್ ಆಂತರಿಕ ವಿಮಾನಯಾನಗಳ ಹಾರಾಟ ಮಾತ್ರವಲ್ಲದೆ ಯುರೋಪ್ ಹಾಗೂ ಏಶ್ಯ ದೇಶಗಳಿಗೂ ವಾಯುಯಾನ ಸೇವೆಯನ್ನು ಒದಗಿಸುತ್ತಿದೆ.
ತನ್ನ ಪೆಟ್ರೋಲ್ ವಿತರಣಾ ವ್ಯವಸ್ಥೆಯ ಕಂಪ್ಯೂಟರ್ ಜಾಲದ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಸೈಬರ್ ದಾಳಿ ನಡೆಸಿರುವುದಾಗಿ ಇರಾನ್ ಕಳೆದ ತಿಂಗಳು ಆರೋಪಿಸಿತ್ತು.







