ಅಮಿತ್ ಶಾ ಭೇಟಿಗೆ ಅನುಮತಿ ನಿರಾಕರಣೆ: ಗೃಹ ವ್ಯವಹಾರ ಸಚಿವಾಲಯದ ಹೊರಗೆ ಟಿಎಂಸಿ ಪ್ರತಿಭಟನೆ

photo: TMC koo app
ಹೊಸದಿಲ್ಲಿ: ಬಿಜೆಪಿ ಆಡಳಿತವಿರುವ ತ್ರಿಪುರಾದಲ್ಲಿ ರವಿವಾರ ತನ್ನ ಪಕ್ಷದ ಸದಸ್ಯರು ಹಾಗೂ ಕಾರ್ಯಕರ್ತರ ಮೇಲೆ ನಡೆದ ಹಿಂಸಾಚಾರ ಹಾಗೂ ಈ ಕುರಿತಾಗಿ ಗೃಹ ಸಚಿವ ಅಮಿತ್ ಶಾ ಭೇಟಿಗೆ ಅನುಮತಿ ನಿರಾಕರಿಸಿದ್ದನ್ನು ಖಂಡಿಸಿ ಗೃಹ ವ್ಯವಹಾರಗಳ ಸಚಿವಾಲಯದ ಹೊರಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ನ 12ಕ್ಕೂ ಅಧಿಕ ಸಂಸದರು ಸೋಮವಾರ ಧರಣಿ ನಡೆಸಿದರು.
ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷೆ ಸಯಾನಿ ಘೋಷ್ ಅವರನ್ನು ರವಿವಾರ ಬಂಧಿಸಲಾಯಿತು ಹಾಗೂ ಘೋಷ್ ವಿರುದ್ಧ ತ್ರಿಪುರಾ ಪೊಲೀಸರು ಕೊಲೆ ಯತ್ನದ ಸೆಕ್ಷನ್ಗಳ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ತ್ರಿಪುರಾದಲ್ಲಿ ನವೆಂಬರ್ 25 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಗದಿಯಾಗಿದೆ.
ವರದಿ ಸಲ್ಲಿಸಲು ಟಿಎಂಸಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವಂತೆ ಕೋರಿದೆ. ಆದಾಗ್ಯೂ, ಅವರಿಗೆ ಭೇಟಿ ನಿರಾಕರಿಸಲಾಗಿದೆ.
ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಟಿಎಂಸಿ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ, “ನಾವು ಪದೇ ಪದೇ ಗೃಹ ಸಚಿವರ ಕಚೇರಿಗೆ ಅಪಾಯಿಂಟ್ಮೆಂಟ್ಗಾಗಿ ಕರೆ ಮಾಡಿದ್ದೇವೆ. ಆದರೆ ಅದನ್ನು ನೀಡಲಿಲ್ಲ. ಇದಕ್ಕಾಗಿಯೇ ನಾವು ಗೃಹ ಸಚಿವಾಲಯದ ಹೊರಗೆ ಬಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ’’ ಎಂದು.
ಇದಕ್ಕೂ ಮೊದಲು, ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರಿಯಾನ್ ತನ್ನ ಸದಸ್ಯರ ಮೇಲೆ ಆಪಾದಿತ ದಾಳಿಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಸ್ಥಿಕೆಗೆ ಕೋರಿದರು.
ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಟಿಎಂಸಿ ನಾಯಕರು 'ನಾವು ಜಯಿಸುತ್ತೇವೆ' ಎಂಬ ಹಾಡುಗಳನ್ನು ಹಾಡಿದರು ಮತ್ತು ಘಟನೆಯ ಕುರಿತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.