"ನನ್ನ ದೇಶವನ್ನು 10 ವರ್ಷಗಳ ಕಾಲ ನಗಿಸಿದ್ದೇನೆ, ಭಾರತಕ್ಕಾಗಿ ಪ್ರೇಮಪತ್ರಗಳನ್ನು ಬರೆಯುತ್ತಿರಬೇಕೆಂದು ಬಯಸಿದ್ದೇನೆ"
ಕಾಮೆಡಿಯನ್ ವೀರ್‌ದಾಸ್

ಹೊಸದಿಲ್ಲಿ: ತಮ್ಮ ʼಐ ಕಮ್ ಫ್ರಮ್ ಟು ಇಂಡಿಯಾಸ್ʼ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದ ನಂತರ ಮೊದಲ ಬಾರಿ ಮಾಧ್ಯಮದ ಜತೆ ಮಾತನಾಡಿರುವ ಕಾಮಿಡಿಯನ್ ವೀರ್ ದಾಸ್, "ನಾನು ನನ್ನ ದೇಶವನ್ನು ಹತ್ತು ವರ್ಷಗಳ ಕಾಲ ನಗಿಸಿದ್ದೇನೆ ಹಾಗೂ ಭಾರತಕ್ಕೆ ʼಪ್ರೇಮಪತ್ರಗಳನ್ನುʼ ಬರೆಯುವುದನ್ನು ಮುಂದುವರಿಸುವ ಆಶಾವಾದವಿದೆ" ಎಂದಿದ್ದಾರೆ.
"ನಗುವುದು ಒಂದು ಸಂಭ್ರಮಾಚರಣೆ ಎಂದು ನಾನಂದುಕೊಂಡಿದ್ದೇನೆ. ನಗು ಹಾಗೂ ಕರತಾಡನ ಒಂದು ಕೊಠಡಿಯನ್ನು ತುಂಬಿದಾಗ ಅದು ಹೆಮ್ಮೆಯ ವಿಚಾರ. ಹಾಸ್ಯ ಪ್ರವೃತ್ತಿಯಿರುವ ಯಾವುದೇ ಭಾರತೀಯ, ವಿಡಂಬನೆಯನ್ನು ಅರ್ಥೈಸುತ್ತಾರೆ ಅಥವಾ ನನ್ನ ಸಂಪೂರ್ಣ ವೀಡಿಯೋ ನೋಡಿದವರು ಆ ಕೊಠಡಿಯಲ್ಲಿ ಅದೇ ನಡೆದಿದ್ದು ಎಂದು ಅರಿಯುತ್ತಾರೆ" ಎಂದು ವಿವಾದಾತ್ಮಕ ವೀಡಿಯೋ ಕುರಿತು ಅವರು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.
"ನಾನು ನನ್ನ ದೇಶವನ್ನು ಹತ್ತು ವರ್ಷ ನಗಿಸಿದ್ದೇನೆ. ನನ್ನ ದೇಶದ ಬಗ್ಗೆ ಬರೆಯಲು ನನ್ನ ಜೀವನವನ್ನು ಮುಡಿಪಾಗಿಸಿದ್ದೇನೆ. ನಾವು ಇಲ್ಲಿ ಎಮ್ಮೀಸ್‍ನಲ್ಲಿದ್ದೇವೆ ಏಕೆಂದರೆ ನಾನು ನನ್ನ ದೇಶಕ್ಕೆ ಒಂದು ಪ್ರೇಮಪತ್ರ ಬರೆದಿದ್ದೆ. ನಾನು ನನ್ನ ಕಾಮಿಡಿ ಮಾಡಲು ಸಾಧ್ಯವಾದಷ್ಟು ಸಮಯ ನನ್ನ ದೇಶಕ್ಕೆ ಪ್ರೇಮಪತ್ರಗಳನ್ನು ಬರೆಯುತ್ತಿರಲು ಬಯಸುತ್ತೇನೆ,'' ಎಂದು ಅವರು ಹೇಳಿದ್ದಾರೆ.
ಇನ್ನು ಮುಂದೆ ಮಧ್ಯಪ್ರದೇಶದಲ್ಲಿ ಕಾರ್ಯಕ್ರಮ ನೀಡಲು ಅನುಮತಿಸುವುದಿಲ್ಲ ಎಂದು ಅಲ್ಲಿನ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದʼ ವೀರ್ ದಾಸ್, "ನಾನು ಆ ಸೇತುವೆಗಳನ್ನು ದಾಟಿ ಅವರ ಹತ್ತಿರ ವಿನಮ್ರನಾಗಿ ಬರಬೇಕಿದೆ" ಎಂದು ಹೇಳಿದರು.
ಅವರ ನೆಟ್‍ಫ್ಲಿಕ್ಸ್ ಸ್ಪೆಷಲ್ ʼವೀರ್ ದಾಸ್: ಫಾರ್ ಇಂಡಿಯಾ' ಕಾರ್ಯಕ್ರಮಕ್ಕಾಗಿ ಅವರು ಕಾಮಿಡಿ ಸೆಕ್ಷನ್‍ನಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದರಿಂದ ದಾಸ್ ಪ್ರಸಕ್ತ ಇಂಟರ್‍ನ್ಯಾಷನಲ್ ಎಮ್ಮಿ ಅವಾರ್ಡ್ಸ್ ನಲ್ಲಿ 2021ರಲ್ಲಿ ಭಾಗವಹಿಸಲು ನ್ಯೂಯಾರ್ಕ್‍ನಲ್ಲಿದ್ದಾರೆ.