ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 140 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹ

Photo: The new indian express
ಹೈದರಾಬಾದ್: ಆಂಧ್ರಪ್ರದೇಶದ ಪೆನ್ನಾ ನದಿಯ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯು 140 ವರ್ಷಗಳ ದಾಖಲೆಯನ್ನು ಪುಡಿಗಟ್ಟಿದೆ.
ಕಳೆದ ಕೆಲವು ದಿನಗಳಿಂದ ಪೆನ್ನಾ ನದಿಗೆ ಅನ್ನಮಯ್ಯ ನೀರಾವರಿ ವ್ಯವಸ್ಥೆಯಿಂದ 2 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನೆಲ್ಲೂರು ಅಣೆಕಟ್ಟಿನಿಂದ ದಾಖಲೆಯ 5.49 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದೆ ಎಂದು ನೆಲ್ಲೂರು ಪ್ರವಾಹದ ಮೇಲ್ವಿಚಾರಣೆಯ ವಿಶೇಷ ಅಧಿಕಾರಿ ಬಿ. ರಾಜಶೇಖರ್ ತಿಳಿಸಿದ್ದಾರೆ.
140 ವರ್ಷಗಳ ನಂತರ ಈ ರೀತಿಯ ಪ್ರವಾಹ ಕಂಡುಬಂದಿದೆ ಎಂದು ಕೇಂದ್ರ ಜಲ ಆಯೋಗವು ಆಂಧ್ರಪ್ರದೇಶದ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. 1882 ರಲ್ಲಿ ಕೊನೆಯ ಬಾರಿಗೆ ಅಂತಹ ದೊಡ್ಡ ಹರಿವು ಸಂಭವಿಸಿತ್ತು.
ನೀರಿನ ಹರಿವು ರಾಷ್ಟ್ರೀಯ ಹೆದ್ದಾರಿ 16 ಅನ್ನು ಒಡೆದು ಕೊವ್ವೂರು ಬಳಿ ಚೆನ್ನೈ-ಕೋಲ್ಕತ್ತಾ ರಸ್ತೆ ಸಂಪರ್ಕವನ್ನು ಮುರಿದಿದೆ. ಇದೀಗ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಪುನಃಸ್ಥಾಪಿಸಲಾಗಿದೆ.
ನೆಲ್ಲೂರಿನಲ್ಲಿ ಸ್ಥಾಪಿಸಲಾದ 90 ಪರಿಹಾರ ಶಿಬಿರಗಳಲ್ಲಿ 35,000 ಕ್ಕೂ ಹೆಚ್ಚು ಜನರನ್ನು ಇರಿಸಲಾಗಿದೆ.
ಕಳೆದ ವಾರ ಆರಂಭವಾದ ನಾಲ್ಕು ದಿನಗಳ ಮಳೆಯಿಂದ ಆಂಧ್ರಪ್ರದೇಶವು ಪ್ರವಾಹಕ್ಕೆ ಒಳಗಾಗಿದೆ ಹಾಗೂ ರಾಜ್ಯದ ಅತಿದೊಡ್ಡ ನೀರಿನ ಜಲಾಶಯಗಳಲ್ಲಿ ಬಿರುಕುಗಳು ಉಂಟಾಗಿವೆ.