ಸಂಸತ್ತಿನ ಚಳಿಗಾಲದ ಅಧಿವೇಶನ: ನ.28ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಹೊಸದಿಲ್ಲಿ,ನ.22: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭದ ಮುನ್ನಾದಿನ,ನ.28ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಲಾಗಿದೆ. ಕೃಷಿ ಕಾಯ್ದೆಗಳ ರದ್ದತಿ,ಕನಿಷ್ಠ ಬೆಂಬಲ ಬೆಲೆ ಕುರಿತು ಕಾನೂನಿಗಾಗಿ ರೈತರ ಬೇಡಿಕೆ ಮತ್ತು ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆ ಇವು ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ.
ಅದೇ ದಿನ ಸಂಜೆ ಬಿಜೆಪಿ ತನ್ನ ಸಂಸದೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಲಿದೆ. ಅಪರಾಹ್ನ ಮೂರು ಗಂಟೆಗೆ ಎನ್‌ಡಿಎ ಸದನ ನಾಯಕರು ಸಭೆ ಸೇರಲಿದ್ದು,ಇವೆರಡೂ ಸಭೆಗಳಿಗೆ ಮೋದಿ ಹಾಜರಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೃಷಿ ಕಾಯ್ದೆಗಳ ರದ್ದತಿ ಚಳಿಗಾಲದ ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾವಗೊಳ್ಳಲಿದೆ. ಈ ಸಂಬಂಧ ಮಸೂದೆಗೆ ಸಚಿವ ಸಂಪುಟವು ಬುಧವಾರ ಅನುಮೋದನೆಯನ್ನು ನೀಡುವ ನಿರೀಕ್ಷೆಯಿದೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಮೋದಿ ಕಳೆದ ಶುಕ್ರವಾರ ಪ್ರಕಟಿಸಿದ್ದರು.
ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳು ಎಂಎಸ್‌ಪಿಗಾಗಿ ಕಾನೂನು ರಚನೆಯ ರೈತರ ಇನ್ನೊಂದು ಬೇಡಿಕೆಯ ಈಡೇರಿಕೆಗಾಗಿ ಸರಕಾರದ ಮೇಲೆ ಒತ್ತಡವನ್ನು ಹೇರುವ ನಿರೀಕ್ಷೆಯಿದೆ. ಈ ಬೇಡಿಕೆಯನ್ನೂ ಒಪ್ಪಿಕೊಳ್ಳದ ಹೊರತು ತಮ್ಮ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲು ರೈತರು ನಿರಾಕರಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ತ್ರಿಪುರಾ ಹಿಂಸಾಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾವಿಸುವ ಸಾಧ್ಯತೆಯಿದೆ. ಬಿಜೆಪಿ ಆಡಳಿತದ ತ್ರಿಪುರಾದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರ ಮೇಲಿನ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಡಝನ್‌ಗೂ ಅಧಿಕ ಟಿಎಂಸಿ ಸಂಸದರು ಸೋಮವಾರ ಗೃಹಸಚಿವ ಅಮಿತ್ ಶಾ ಅವರ ಕಚೇರಿಯ ಹೊರಗೆ ಧರಣಿ ನಡೆಸಿದರು. ಆದರೆ ಅವರಿಗೆ ಶಾ ಜೊತೆ ಭೇಟಿಗೆ ಅವಕಾಶವನ್ನು ನಿರಾಕರಿಸಲಾಗಿತ್ತು.
ಕಾಂಗ್ರೆಸ್ ಮತ್ತು ಟಿಎಂಸಿ ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರಾವಧಿಯ ವಿಸ್ತರಣೆಯ ವಿಷಯವನ್ನು ಸರ್ವಪಕ್ಷ ಸಭೆಯಲ್ಲಿ ಎತ್ತುವ ಸಾಧ್ಯತೆಯಿದೆ. ವಿಸ್ತರಣೆಯನ್ನು ಪ್ರಶ್ನಿಸಿ ಅವು ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿವೆ.