ಮಂಗಳೂರು ಕ್ಯಾಥೊಲಿಕ್ ಧರ್ಮಪ್ರಾಂತದ ನೂತನ ಪಿಆರ್‌ಒ ಆಗಿ ರೆ.ಡಾ.ಜಾನ್ ಬ್ಯಾಪ್ಟಿಸ್ಟ್ ಸಲ್ದಾನ್ಹಾ ನೇಮಕ

ಮಂಗಳೂರು, ನ. 22: ಮಂಗಳೂರು ಕ್ಯಾಥೊಲಿಕ್ ಧರ್ಮಪ್ರಾಂತಕ್ಕೆ ಮೂರು ವರ್ಷಗಳ ಅವಧಿಗೆ ನೂತನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ (ಪಿಆರ್‌ಒ) ರೆ.ಡಾ.ಜಾನ್ ಬ್ಯಾಪ್ಟಿಸ್ಟ್ ಸಲ್ದಾನ್ಹಾ ಅವರನ್ನು ಮಂಗಳೂರಿನ ಬಿಷಪ್ ಅತಿ ವಂದನೀಯ ಡಾ.ಪೀಟರ್ ಪೌಲ್ ಸಲ್ದಾನ್ಹಾ ನೇಮಕ ಮಾಡಿದ್ದಾರೆ.
ಕಳೆದ ವರ್ಷ ನೇಮಕಗೊಂಡ ನಾಗರಿಕ ಪಿಆರ್‌ಒ (ಲೇ ಪಿಆರ್‌ಒ) ರಾಯ್ ಕ್ಯಾಸ್ಟೆಲಿನೊ ಜೊತೆ ಸಮನ್ವಯದಲ್ಲಿ ಅವರು ಕಾರ್ಯನಿರ್ವಸಲಿದ್ದಾರೆ.
ಇದುವರೆಗೆ ಈ ಹುದ್ದೆಯನ್ನು ಮಂಗಳೂರು ಧರ್ಮಪ್ರಾಂತದ ಪ್ರಾಕ್ಯುರೇಟರ್ ಫಾ.ವಿಜಯ್ ಲೋಬೋ ನಿರ್ವಹಿಸುತ್ತಿದ್ದರು. ಪ್ರಸ್ತುತ ರೆ.ಡಾ. ಜೆಬಿ ಸಲ್ದಾನ್ಹಾ ಬಿಜೈ ಸಂತ ಫ್ರಾನ್ಸಿಸ್ ಕ್ಸೇಯರ್ ಚರ್ಚ್‌ನ ಪ್ರಧಾನ ಅರ್ಚಕರಾಗಿ ಮತ್ತು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ರೆ.ಡಾ. ಜೆ ಬಿ ಸಲ್ದಾನ್ಹಾ ಕ್ಯಾಥೋಲಿಕ್ ಸಭಾದ ಧರ್ಮಪ್ರಾಂತದ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಿಸಲಾಗಿದೆ. ಫಾ.ಮ್ಯಾಥ್ಯೂ ವಾಸ್ ಅವರ ನಿಧನದಿಂದಾಗಿ ಈ ಹುದ್ದೆ ಖಾಲಿಯಾಗಿತ್ತು.
ರೆ.ಡಾ. ಜೆ ಬಿ ಸಲ್ದಾನ್ಹಾ ಈ ಹಿಂದೆ ಮಂಗಳೂರು ವಿವಿ ಕ್ರೈಸ್ತ ಪೀಠದ ದ ಮುಖ್ಯಸ್ಥರಾಗಿ ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ದ್ದಾರೆ. ಬೆಲ್ಜಿಯಂನ ಲ್ಯುವೆನ್ ಕ್ಯಾಥೋಲಿಕ್ ವಿವಿಯ ಪಿಎಚ್.ಡಿ., ಮತ್ತು ಸಮಾಜಶಾಸ್ತ್ರದಲ್ಲಿ ಎಂಎ, ಅಪ್ಲೈಡ್ ಎಥಿಕ್ಸ್‌ನಲ್ಲಿ ಎಂಎ, ಧಾರ್ಮಿಕ ಅಧ್ಯಯನದಲ್ಲಿ ಎಂಎ, ಡಿಪ್ಲೊಮಾ ಇನ್ ಡೆಪ್ತ್ ಕೌನ್ಸೆಲಿಂಗ್ ಮತ್ತು ಡಿಪ್ಲೊಮಾ ಇನ್ ಡೆವಲಪ್‌ಮೆಂಟಲ್ ಜರ್ನಲಿಸಂ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. ಅಲ್ಲದೆ ಹಲವು ಕೃತಿಗಳು ಮತ್ತು ಧಾರ್ಮಿಕ ಲೇಖನಗಳನ್ನು ಬರೆದಿದ್ದಾರೆ.







