ಮಂಗಳೂರು: ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ

ಮಂಗಳೂರು: ಎಂಸಿಸಿ ಬ್ಯಾಂಕ್ ಎಂದು ಪ್ರಖ್ಯಾತವಾಗಿರುವ ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾದಿಸಿದ್ದು 2020-21ನೇ ವಿತ್ತೀಯ ವರ್ಷದಲ್ಲಿ ಶೇಕಡಾ 10% ಲಾಭಾಂಶ ಘೋಷಿಸಿರುತ್ತದೆ. ಜೊತೆಗೆ ಲಾಭ ಗಳಿಕೆಯಲ್ಲಿ ಶೇಕಡಾ 143 ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭವು ರೂ.5.96 ಕೋಟಿಯಾಗಿರುತ್ತದೆ.
ಬ್ಯಾಂಕಿನ 103ನೇ ವಾರ್ಷಿಕ ಸಾಮಾನ್ಯ ಸಭೆ ವರ್ಚುವಲ್ ಪ್ಲಾಟ್ ಫಾರ್ಮ್‍ನಲ್ಲಿ ಶನಿವಾರ ಮಂಗಳೂರಿನಲ್ಲಿರುವ ಎಂಸಿಸಿ ಬ್ಯಾಂಕಿನ ಆಡಳಿತ ಕಚೇರಿಯ ಸಭಾಭವನದಲ್ಲಿ ಜರುಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಅನಿಲ್ ಲೋಬೊ, ಕೋವಿಡ್ – 19 ರೋಗದ ಪ್ರಸರಣೆಯಿಂದ ಆದ ಆರ್ಥಿಕ ಬಿಕ್ಕಟ್ಟಿನ ನಡುವೆಯು ಎಂ.ಸಿ.ಸಿ.ಬ್ಯಾಂಕ್ ಒಟ್ಟು ರೂ.5.96 ಕೋಟಿ ನಿವ್ವಳ ಲಾಭ ಗಳಿಸಿದೆ. ಒಟ್ಟು ಠೇವಣಿಯಲ್ಲಿ ಶೇಕಡಾ 15.86 ಪ್ರಗತಿ ಸಾಧಿಸಿದ್ದು, ರೂ.456.83 ಕೋಟಿ ಠೇವಣಿ, ಒಟ್ಟು ಮುಂಗಡದಲ್ಲಿ ಶೇಕಡಾ 15.68 ಪ್ರಗತಿ ಸಾಧಿಸಿದ್ದು ರೂ.306.62 ಕೋಟಿ ಮುಂಗಡಗಳು, ದುಡಿಯುವ ಬಂಡವಾಳ ರೂ.527.91 ಕೋಟಿ (ಪ್ರಗತಿ ಶೇಕಡಾ 15.07) ಮತ್ತು ಶೇರು ಬಂಡವಾಳ ರೂ.18.43 ಕೋಟಿ ಆಗಿದೆ ಎಂದರು. ಜೊತೆಗೆ ಬ್ಯಾಂಕಿನ ಎನ್.ಪಿ.ಎ. ಪ್ರಮಾಣವು ಕಳೆದ ಆರ್ಥಿಕ ವರ್ಷದಲ್ಲಿದ್ದ 7.17% ದಿಂದ 1.92%ಕ್ಕೆ ತಲುಪಿರುವುದು ಬ್ಯಾಂಕಿನ ಬೆಳವಣಿಗೆ ಉತ್ತಮವಾಗಿದೆ ಎಂದು ತೋರಿಸುತ್ತದೆ ಎಂದು ತಿಳಿಸಿದರು. ಬ್ಯಾಂಕಿನ ಅನುತ್ಪಾದಕ ಸಾಲಕ್ಕೆ ಒದಗಿಸಿದ ಅವಕಾಶದ ಅನುಪಾತವು 75.74% ಆಗಿರುತ್ತದೆ. ಬ್ಯಾಂಕಿನ ಅಖಂಖ ಪ್ರಮಾಣವು ಆರ್‍ಬಿಐ ನಿಗದಿಪಡಿಸಿರುವ ಕನಿಷ್ಟ ಮಿತಿ ಶೇಕಡಾ 9%ಕ್ಕಿಂತ ಹೆಚ್ಚಿದ್ದು, 14.42% ಇರುತ್ತದೆ ಎಂದರು.
ಬ್ಯಾಂಕಿಂಗ್ ಕ್ಷೇತ್ರವು ಸ್ಪರ್ಧಾತ್ಮಕವಾಗಿದ್ದು, ಆಧುನಿಕ ತಂತ್ರಜ್ಞಾನದ ಒಳಗೊಳ್ಳುವಿಕೆಯಿಂದ ಮಾತ್ರ ನಮ್ಮ ಬ್ಯಾಂಕ್ ಪ್ರಗತಿಪಥದಲ್ಲಿ ಸಾಗಲು ಸಾಧ್ಯ. ಆದುದರಿಂದ ಬ್ಯಾಂಕಿನ ಬೆಳವಣಿಗೆಗೆ ಪರ್ಯಾಪ್ತವಾದ ತಂತ್ರಜ್ಞಾನವನ್ನು ಆಳವಡಿಸಲು ಸದಸ್ಯರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕರೆಕೊಟ್ಟರು. ಬ್ಯಾಂಕ್ ಮುಂದಿನ ವರ್ಷ (2022) ಶತಮಾನೋತ್ತರ ದಶಮಾನೋತ್ಸವವನ್ನು ಆಚರಿಸುತ್ತಿದ್ದು ಬ್ಯಾಂಕಿನ ಸದಸ್ಯರು ಈ ಆಚರಣೆಯನ್ನು ಅರ್ಥಪೂರ್ಣಗೊಳಿಸಿ, ಬ್ಯಾಂಕಿನ ವ್ಯವಹಾರವನ್ನು ವ್ರದ್ದಿಗೊಳಿಸಲು ಕೈಜೋಡಿಸಿ ಬ್ಯಾಂಕನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ಸಹಕರಿಸಬೇಕೆಂದು ಹೇಳಿದರು.
ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ 102ನೇ ವಾರ್ಷಿಕ ಸಾಮಾನ್ಯ ಸಭೆಯ ವಿವರಗಳನ್ನು ಓದಿದರು. 2020-21ರ ಲೆಕ್ಕ ಪರಿಶೋಧಿತ ಹಣಕಾಸು, ಲೆಕ್ಕ ಪರಿಶೋಧನಾ ವರದಿ, 2021-22ರ ಆರ್ಥಿಕ ವರ್ಷದ ಚಟುವಟಿಕೆಗಳ ಕಾರ್ಯಕ್ರಮ ಮತ್ತು 2021-22ರ ಬಜೆಟ್ ಅನ್ನು ಸಾಮಾನ್ಯ ಸಭೆಯ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಯಿತು.
ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅಧ್ಯಕ್ಷರು, ಸದಸ್ಯರು ನೀಡಿದ ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದು ಮುಂದಿನ ವರ್ಷದಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ನಿರ್ದೇಶಕರಾದ ಡಿ.ಜೆ. ಪತ್ರಾವೊ, ಅಂಡ್ರ್ಯೂ ಡಿಸೋಜ, ಮಾರ್ಸೆಲ್ ಡಿಸೋಜ, ಜೆ. ಪಿ. ರೊಡ್ರಿಗಸ್, ಎಲ್‍ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿ’ಸೋಜ, ಅನಿಲ್ ಪತ್ರಾವೊ, ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೇರೊ, ಐರಿನ್ ರೆಬೆಲ್ಲೊ, ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ, ಮೈಕಲ್ ಡಿ’ಸೋಜ, ಜನರಲ್ ಮ್ಯಾನೇಜರ್ ಸುನಿಲ್ ಮಿನೆಜಸ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ರಾಜ್ ಮಿನೆಜಸ್ ಉಪಸ್ಥಿತರಿದ್ದರು.
ನಿರ್ದೇಶಕಿ ಐರಿನ್ ರೆಬೆಲ್ಲೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಜನರಲ್ ಮ್ಯಾನೇಜರ್ ಸುನಿಲ್ ಮಿನೆಜಸ್ ವಂದಿಸಿದರು.







