ಕೊಡಗು ಜಿಲ್ಲೆಯ 30 ಸಾವಿರ ರೈತರಿಗೆ 583 ಕೋಟಿ ಸಾಲ ವಿತರಣೆ: ಸಚಿವ ಎಸ್.ಟಿ.ಸೋಮಶೇಖರ್

ಮಡಿಕೇರಿ, ನ.22: ವಿಧಾನಪರಿಷತ್ ನಲ್ಲಿ ಜನರ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಡುವ, ಜನರ ಭಾವನೆಗಳಿಗೆ ಸ್ಪಂದಿಸುವ ಸುಜಾ ಕುಶಾಲಪ್ಪ ಅವರನ್ನು ಆಯ್ಕೆ ಮಾಡಿದರೆ ನೂರಕ್ಕೆ ನೂರರಷ್ಟು ಸ್ಥಳೀಯ ಸಮಸ್ಯೆಗಳು ಬಗೆಹರಿಯಲಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮಡಿಕೇರಿಯಲ್ಲಿ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಸಚಿವರು, ವಿಧಾನಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈಶ್ವರಪ್ಪ, ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಪ್ರಚಾರ ಮಾಡಿದ 9 ಜಿಲ್ಲೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತರ ಅನುಕೂಲಕ್ಕಾಗಿ ಸಹಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗು ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ರೈತರಿಗೆ ಅಲ್ಪಾವಧಿ, ದೀರ್ಘಾವಧಿ ಸಾಲ ಸೇರಿದಂತೆ ಸುಮಾರು 583 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ ಎಂದು ಹೇಳಿದರು.
21 ಡಿಸಿಸಿ ಬ್ಯಾಂಕ್ ಗಳ ಪೈಕಿ ಸಾಲ ವಿತರಣೆ, ಸಾಲ ಮರುಪಾವತಿ, ಕಟ್ಟಡ ನಿರ್ಮಾಣ ವಿಷಯದಲ್ಲಿ ಮುಂದೆ ಇರುವುದು ಕೊಡಗು ಡಿಸಿಸಿ ಬ್ಯಾಂಕ್ ಎಂದರು.
ಗ್ರಾಪಂ, ತಾಪಂ, ಜಿಪಂ ಸದಸ್ಯರಿಗೆ ಅನುಕೂಲ ಮಾಡಿಕೊಡಲು ನಮ್ಮ ಸರ್ಕಾರ ಡಿಲಿಮಿಟೇಶನ್ ಮಾಡಿದೆ. ಇದರಿಂದ ಎಲ್ಲಾ ಕಾರ್ಯಕರ್ತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.







