ಕೇಂದ್ರದ ಪ್ರಯತ್ನಗಳಿಂದ ರೈತರು ಎಂದಿಗೂ ತೃಪ್ತರಾಗಿಲ್ಲ:ಕೃಷಿ ಕಾನೂನುಗಳ ಬಗ್ಗೆ ಉಮಾ ಭಾರತಿ
'ಪ್ರಧಾನಿ ನರೇಂದ್ರ ಮೋದಿಯವರ ಹಠಾತ್ ಘೋಷಣೆ ತನ್ನನ್ನು ಮೂಕ ವಿಸ್ಮಿತರನ್ನಾಗಿ ಮಾಡಿದೆ'

ಭೋಪಾಲ್: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಹಠಾತ್ ಘೋಷಣೆಯು ತನ್ನನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ ಎಂದಿರುವ ಬಿಜೆಪಿ ನಾಯಕಿ ಉಮಾಭಾರತಿ ಈ ಕ್ರಮವು ಕೃಷಿಕರಿಗೆ ಕಾಯ್ದೆಯ ಪ್ರಯೋಜನಗಳನ್ನು ಸರಿಯಾಗಿ ತಿಳಿಸುವಲ್ಲಿ ಪಕ್ಷದ ಕಾರ್ಯಕರ್ತರ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.
ಕಳೆದ ವಾರದ ಕೊನೆಯಲ್ಲಿ ಮಾಡಿದ ಘೋಷಣೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಭಾರತದ ರೈತರು ಇದುವರೆಗೆ ಸರಕಾರದ ಯಾವುದೇ ಕ್ರಮಗಳಿಂದ ತೃಪ್ತರಾಗಿಲ್ಲ ಎಂದು ಹೇಳಿದ್ದಾರೆ.
"ನಾನು ವಾರಣಾಸಿಯ ಗಂಗಾ ತೀರದಲ್ಲಿ ಕಳೆದ ನಾಲ್ಕು ದಿನಗಳಿಂದ ಇದ್ದೇನೆ. ನವೆಂಬರ್ 19 ರಂದು ಕೃಷಿ ಕಾನೂನುಗಳನ್ನು ರದ್ದುಪಡಿಸುವ ಬಗ್ಗೆ ಪ್ರಧಾನ ಮಂತ್ರಿಯವರು ಘೋಷಿಸಿದ ನಂತರ ನಾನು ಮೂಕವಿಸ್ಮಿತನಾಗಿದ್ದೆ. ಹಾಗಾಗಿ ನಾನು ಮೂರು ದಿನ ತಡವಾಗಿ ಪ್ರತಿಕ್ರಿಯಿಸಿದೆ" ಎಂದು ಭಾರತಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೂರು ಕೃಷಿ ಮಾರುಕಟ್ಟೆ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಘೋಷಣೆಯನ್ನು ಮಾಡುವಾಗ ನನ್ನಂತಹ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಮಾಜಿ ಕೇಂದ್ರ ಸಚಿವೆ ಹೇಳಿದರು.
"ಪ್ರಧಾನಿ ನರೇಂದ್ರ ಮೋದಿಜಿ ರೈತರಿಗೆ ಕೃಷಿ ಕಾನೂನುಗಳ ಮಹತ್ವವನ್ನು ವಿವರಿಸಲು ಸಾಧ್ಯವಾಗದಿದ್ದರೆ ಅದು ನಮ್ಮ ಬಿಜೆಪಿ ಕಾರ್ಯಕರ್ತರ ಅಸಮರ್ಪಕತೆಯಾಗಿದೆ. ನಾವು ರೈತರಿಗೆ (ಕಾನೂನುಗಳ ಮಹತ್ವ) ಸರಿಯಾಗಿ ತಿಳಿಸಲು ಏಕೆ ಸಾಧ್ಯವಾಗಲಿಲ್ಲ?" ಎಂದು ಪ್ರಶ್ನಿಸಿದರು.