ಮಾನನಷ್ಟ ಪ್ರಕರಣ; ನವಾಬ್ ಮಲಿಕ್ ಟ್ವೀಟ್ ಮಾಡಲು ಮುಕ್ತ: ನ್ಯಾಯಾಲಯ
ಮುಂಬೈ, ನ. 22: ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ತಂದೆ ಹಾಗೂ ಕುಟುಂಬವನ್ನು ಗುರಿಯಾಗಿರಿಸಿ ಯಾವುದೇ ಹೇಳಿಕೆ ಅಥವಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡದಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್‌ಗೆ ನಿರ್ಬಂಧ ವಿಧಿಸಲು ಬಾಂಬೆ ಉಚ್ಚ ನ್ಯಾಯಾಲಯ ಸೋಮವಾರ ನಿರಾಕರಿಸಿದೆ.
ತನ್ನ ಕುಟುಂಬದ ವಿರುದ್ಧ ಟ್ವೀಟ್ ಮಾಡಿದ ಬಗ್ಗೆ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನ್‌ದೇವ್ ವಾಂಖೆಡೆ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ನಡೆಸಿತು.
ಮಲಿಕ್ ಅವರ ಟ್ವಿಟ್‌ಗಳನ್ನು ದುರುದ್ದೇಶಪೂರಿತ ಎಂದು ಪರಿಗಣಿಸಿರುವ ನ್ಯಾಯಾಲಯ, ಟ್ವೀಟ್‌ನಲ್ಲಿ ಮಾಡಿರುವ ಆರೋಪಗಳನ್ನು ಸುಳ್ಳು ಎಂದು ಹೇಳಲು ಈ ಸಂದರ್ಭ ಸಾಧ್ಯವಿಲ್ಲ. ಸಚಿವರು ಟ್ವೀಟ್ ಮಾಡಲು ಮುಕ್ತರು. ಆದರೆ, ಸತ್ಯದ ಸರಿಯಾದ ಪರಿಶೀಲನೆ ಬಳಿಕ ಮಾತ್ರ ಟ್ವೀಟ್ ಮಾಡಬೇಕು ಎಂದು ಬಾಂಬೆ ಉಚ್ಚ ನ್ಯಾಯಾಲಯ ಹೇಳಿದೆ. ಆದಾಗ್ಯೂ ವಾದಿಗೆ ಖಾಸಗಿತನದ ಹಕ್ಕು ಇದೆ, ಪ್ರತಿವಾದಿಗೆ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ಇದೆ. ಮೂಲಭೂತ ಹಕ್ಕುಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯದ ಆದೇಶ ಹೇಳಿದೆ.