ಪಂಜಾಬ್ ವಿಧಾನಸಭಾ ಚುನಾವಣೆ: ಆಪ್ ಗೆದ್ದರೆ ಮಹಿಳೆಯರಿಗೆ 1,000 ರೂ. ಮಾಸಾಶನ: ಕೇಜ್ರಿವಾಲ್ ಭರವಸೆ

ಮೋಗಾ (ಪಂಜಾಬ್),ನ.22: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (ಆಪ್)ಯನ್ನು ಅಧಿಕಾರಕ್ಕೆ ತಂದರೆ ರಾಜ್ಯದಲ್ಲಿಯ 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು 1,000 ರೂ.ಗಳನ್ನು ಜಮಾ ಮಾಡುವುದಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಇಲ್ಲಿ ಭರವಸೆ ನೀಡಿದರು.
ಹಿರಿಯ ಮಹಿಳೆಯರಿಗೆ ಅವರ ಖಾತೆಗಳಲ್ಲಿ ಜಮೆಯಾಗುವ 1,000 ರೂ.ಜೊತೆಗೆ ಅವರ ವೃದ್ಧಾಪ್ಯ ಪಿಂಚಣಿಯು ಮುಂದುವರಿಯುತ್ತದೆ ಎಂದು ಪಂಜಾಬಿಗೆ ಎರಡು ದಿನಗಳ ಭೇಟಿಯನ್ನು ನೀಡಿರುವ ಕೇಜ್ರಿವಾಲ್ ಇಲ್ಲಿ ಸಭೆಯನ್ನುದ್ದೇಶಿಸಿ ತಿಳಿಸಿದರು.
ಆಪ್‌ನ ‘ಮಿಷನ್ ಪಂಜಾಬ್’ನಡಿ ಕೇಜ್ರಿವಾಲ್ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಮುಂದಿನ ಒಂದು ತಿಂಗಳು ರಾಜ್ಯದ ವಿವಿಧೆಡೆಗಳಲ್ಲಿ ರ್‍ಯಾಲಿಗಳನ್ನು ನಡೆಸಲಿದ್ದಾರೆ.
ಕೇಜ್ರಿವಾಲ್ ತನ್ನ ಪಕ್ಷವು ಅಧಿಕಾರಕ್ಕೆ ಬಂದರೆ ಪಂಜಾಬಿನ ಪ್ರತಿಮನೆಗೆ ಮಾಸಿಕ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಪೂರೈಕೆ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧಿಗಳ ಭರವಸೆಗಳನ್ನು ಈಗಾಗಲೇ ನೀಡಿದ್ದಾರೆ.
ಆಪ್ ಪಂಜಾಬಿನಲ್ಲಿ ಮುಖ್ಯ ಪ್ರತಿಪಕ್ಷವಾಗಿದೆ.







