ಬೆಳಗಾವಿಯಲ್ಲಿ ತಲೆ ಎತ್ತಲಿದೆ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ : ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸ್ವಾತಂತ್ರ್ಯ ಯೋಧ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ನಿರ್ಮಿಸಲಾಗುತ್ತಿರುವ ಸೈನಿಕ ಶಾಲೆಯ ಕಾಮಗಾರಿ ಈ ವರ್ಷದ ಕೊನೆಗೆ ಮುಗಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆ ಸಂಗೊಳ್ಳಿಯಲ್ಲಿ ಈ ಶಾಲೆ ತಲೆ ಎತ್ತಲಿದೆ.
"ಇದಕ್ಕಾಗಿ ಈಗಾಗಲೇ 180 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದರ ಕಾಮಗಾರಿ ಪೂರ್ಣಗೊಳಿಸಲು ಇನ್ನೂ 50 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. ಇದು ಯುವಜನತೆ ಶಿಸ್ತಿನ ಜೀವನ ಸಾಗಿಸಲು ನೆರವಾಗಲಿದೆ" ಎಂದು ಶಾಸಕರ ಭವನದ ಬಳಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.
ನಿರ್ಮಾಣ ಕಾರ್ಯ ಮುಗಿದ ತಕ್ಷಣ ಇದನ್ನು ಹಸ್ತಾಂತರ ಮಾಡಿಕೊಳ್ಳುವಂತೆ ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು. ರಾಯಣ್ಣ, ಕನಕದಾಸರ ತತ್ವಗಳನ್ನೇ ಅನುಸರಿಸುತ್ತಿದ್ದವರು ಎಂದು ಅಭಿಪ್ರಾಯಪಟ್ಟರು.
"ನಮ್ಮ ಸರ್ಕಾರ ರಾಯಣ್ಣ ಸಮಾಧಿ ಮತ್ತು ಅವರ ಗೌರವಾರ್ಥ ಮ್ಯೂಸಿಯಂ ಕೂಡಾ ನಿರ್ಮಿಸುತ್ತಿದೆ" ಎಂದು ಸಿಎಂ ಹೇಳಿದರು.





