ಈ ಇ-ರಿಕ್ಷಾ ಚಾಲಕನ ಕ್ವಿಝ್‌ಗೆ ಉತ್ತರಿಸಿದವರಿಗೆ ಉಚಿತ ಸವಾರಿ!

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಲಿಲುವಾಹ್ ಎಂಬಲ್ಲಿನ ಇ-ರಿಕ್ಷಾ ಚಾಲಕರೊಬ್ಬರು ತಮ್ಮ ಪ್ರಯಾಣಿಕರಿಗೆ ಉಚಿತ ಸವಾರಿ ಒದಗಿಸುವ ಪರಿ ಯಾರನ್ನೂ ಚಕಿತಗೊಳಿಸದೇ ಇರದು. ಇವರ ಇ-ರಿಕ್ಷಾದಲ್ಲಿ ಉಚಿತವಾಗಿ ಪ್ರಯಾಣಿಸಬೇಕಿದ್ದರೆ ಪ್ರಯಾಣಿಕರು ಅವರು ಕೇಳುವ 15 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರಿಸಬೇಕು ಅಷ್ಟೇ.
ಈ ಇ-ರಿಕ್ಷಾ ಚಾಲಕನ ಕುರಿತು ಫೇಸ್ಬುಕ್‌ನಲ್ಲಿ ಸಂಕಲನ್ ಸರ್ಕಾರ್ ಎಂಬವರು ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ಸುರಂಜನ್ ಕರ್ಮಕರ್ ಎಂಬ ಇ-ರಿಕ್ಷಾ ಚಾಲಕನ ಕುರಿತು ಸರ್ಕಾರ್ ಬಹಳಷ್ಟು ಬರೆದಿದ್ದಾರೆ. "ನಾನು ಕೇಳುವ 15 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ನೀವು ಉತ್ತರಿಸಿದರೆ ಶುಲ್ಕ ಪಡೆಯುವುದಿಲ್ಲ,'' ಎಂದು ಅವರು ಸರ್ಕಾರ್ ಮತ್ತವರ ಪತ್ನಿಗೆ ಹೇಳಿದ್ದಾರೆ. ತಾವು ತಪ್ಪು ಉತ್ತರ ನೀಡಿದರೆ ಈ ಚಾಲಕ ಹೆಚ್ಚು ದರ ವಿಧಿಸಬಹುದು ಎಂದು ಸರ್ಕಾರ್ ಮೊದಲು ಅಂದುಕೊಂಡರಲ್ಲದೆ ತಾವು ಆಟೋ ದರ ನೀಡುವುದಾಗಿ ಹೇಳಿ ನಂತರ ಪ್ರಶ್ನೆಗಳ ಬಗ್ಗೆ ಕೇಳಿದರು.
ಮೊದಲ ಪ್ರಶ್ನೆ 'ಜನ ಗಣ ಮನ ಅಧಿ' ಬರೆದರ‍್ಯಾರು? ಎಂಬುದಾಗಿತ್ತು. ಕೊನೆಯ ಹೆಚ್ಚುವರಿ ಪದ ಕುರಿತು ಯೋಚಿಸಿ ಈ ಚಾಲಕ ಸರಿಯಾಗಿಲ್ಲ ಎಂದು ಸರ್ಕಾರ್ ತಮ್ಮಲ್ಲೇ ಹೇಳಿಕೊಂಡರು. ಆದರೆ ಚಾಲಕ ಎರಡನೇ ಪ್ರಶ್ನೆ ಕೇಳಿದಾಗ ಇದು ನಿಜವಾಗಿಯೂ ಒಂದು ರಸಪ್ರಶ್ನೆ ಎಂದು ಅವರಿಗೆ ಅನಿಸಿತ್ತು. "ಪಶ್ಚಿಮ ಬಂಗಾಳದ ಮೊದಲ ಸಿಎಂ ಯಾರು?'' ಎಂಬುದು ಎರಡನೇ ಪ್ರಶ್ನೆಯಾದಾಗ ಸರ್ಕಾರ್ ಅವರು ಸ್ವಲ್ಪ ತಡವರಿಸಿ ಬಿ ಸಿ ರೇ ಎಂದಿದ್ದರು, ಅದು ತಪ್ಪಾಗಿತ್ತು. ಹೀಗೆ -ಶ್ರೀದೇವಿಯ ಹುಟ್ಟಿದ ದಿನಾಂಕದಿಂದ ಹಿಡಿದು ಜಗತ್ತಿನ ಮೊದಲ ಪ್ರಣಾಳ ಶಿಶುವಿನ ತನಕ ಹಲವಾರು ಪ್ರಶ್ನೆಗಳಿದ್ದವು. ಸರ್ಕಾರ್ ಕೂಡ ಚಾಲಕನಿಗೆ ಕೆಲ ಪ್ರಶ್ನೆ ಕೇಳಿದಾಗ ಅವರು ಅದಕ್ಕೆ ಉತ್ತರಿಸಿದ್ದು ಕಂಡು ಅವರಿಗೆ ಖುಷಿಯಾಯಿತು ಎಂದು ಸರ್ಕಾರ್ ಪೋಸ್ಟ್ ಮಾಡಿದ್ದಾರೆ.
ಕೊನೆಗೆ ತನ್ನ ಬಗ್ಗೆ ಹೇಳಿಕೊಂಡ ಚಾಲಕ ಕರ್ಮಕರ್ ತಾನು ಆರ್ಥಿಕ ಮುಗ್ಗಟ್ಟಿನಿಂದ ಆರನೇ ತರಗತಿಯಲ್ಲಿರುವಾಗಲೇ ಶಿಕ್ಷಣ ಕೈಬಿಡಬೇಕಾಯಿತಾದರೂ ಪ್ರತಿ ದಿನ ರಾತ್ರಿ 2 ಗಂಟೆ ತನಕವೂ ಓದುವ ಅಭ್ಯಾಸ ಇಟ್ಟುಕೊಂಡಿದ್ದಾಗಿ ಹಾಗೂ ತಾನು ಲಿಲುವಾಹ್ ಬುಕ್ ಫೇರ್ ಫೌಂಡೇಶನ್ ಸದಸ್ಯ ಎಂದೂ ಸರ್ಕಾರ್ ಹೇಳಿಕೊಂಡಿದ್ದಾರೆ.
ಖ್ಯಾತನಾಮರ ಜಯಂತಿಯಂದು ಅವರ ಫೋಟೋವನ್ನು ಆಟೋದಲ್ಲಿರಿಸುವುದಾಗಿ ಚಾಲಕ ಸರ್ಕಾರ್ ಅವರಲ್ಲಿ ಹೇಳಿಕೊಂಡಿದ್ದಾರೆ.
"ಗೂಗಲ್‌ನಲ್ಲಿ ಅದ್ಭುತ್ ತೋತೋವಾಲ ಎಂದು ನೀವು ನನಗಾಗಿ ಹುಡುಕಬಹುದು. ನಾನು ಹಿಂದು ಆಗಿ ಹುಟ್ಟಿದ್ದರೂ ಕೆಲವೊಮ್ಮೆ ಮುಸ್ಲಿಂ ಟೋಪಿ ಧರಿಸುತ್ತೇನೆ,'' ಎಂದು ಚಾಲಕ ಸರ್ಕಾರ್ ಅವರಲ್ಲಿ ಹೇಳಿದ್ದಾರೆ.