ಕಾಂಗ್ರೆಸ್‌ನ ಕೀರ್ತಿ ಆಝಾದ್ ಇಂದು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆ

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಕೀರ್ತಿ ಆಝಾದ್ ಮಂಗಳವಾರ ಸಂಜೆ 5 ಗಂಟೆಗೆ ರಾಷ್ಟ್ರ ರಾಜಧಾನಿಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿನ ಅಕ್ರಮಗಳು ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಬಹಿರಂಗವಾಗಿ ಟೀಕಿಸಿದ್ದಕ್ಕಾಗಿ ಅವರನ್ನು ಡಿಸೆಂಬರ್ 23, 2015 ರಂದು ಬಿಜೆಪಿಯಿಂದ ಅಮಾನತುಗೊಳಿಸಲಾಯಿತು . ನಂತರ 2018 ರಲ್ಲಿ ಅವರು ಕಾಂಗ್ರೆಸ್ ಸೇರಿದ್ದರು.
ಕ್ರಿಕೆಟಿಗ-ರಾಜಕಾರಣಿಯಾಗಿರುವ ಆಝಾದ್ ಬಿಹಾರದ ದರ್ಭಾಂಗಾದಿಂದ ಮೂರು ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು.
ಆಝಾದ್ 1983 ರಲ್ಲಿ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನವೆಂಬರ್ 25 ರಂದು ರಾಷ್ಟ್ರ ರಾಜಧಾನಿ ದಿಲ್ಲಿಗೆ ಭೇಟಿ ನೀಡುವ ಮೊದಲು ಈ ಬೆಳವಣಿಗೆ ನಡೆದಿದೆ.
ನವೆಂಬರ್ 29 ರಂದು ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಮಮತಾ ಬ್ಯಾನರ್ಜಿ ಅವರು ರಾಜಧಾನಿಗೆ ಭೇಟಿ ನೀಡುತ್ತಿದ್ದಾರೆ.