ಸೆಂಟ್ರಲ್ ವಿಸ್ಟಾ ಯೋಜನೆಯ ವಿರುದ್ಧದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ನ. 23: ಹೊಸದಿಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿ ಉಪರಾಷ್ಟ್ರಪತಿಗಳ ಹೊಸ ನಿವಾಸ ನಿರ್ಮಾಣಕ್ಕೆ ಭೂಬಳಕೆಯ ಬದಲಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಪ್ರತಿಯೊಂದನ್ನು ಕೂಡ ಟೀಕಿಸಬಹುದು. ಆದರೆ, ಅದು ರಚನಾತ್ಮಕ ಟೀಕೆಯಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿತು. ‘‘ಅಲ್ಲಿ ನಿರ್ಮಾಣ ಮಾಡುತ್ತಿರುವುದು ಖಾಸಗಿ ಆಸ್ತಿ ಅಲ್ಲ. ಉಪ ರಾಷ್ಟ್ರಪತಿ ಅವರ ನಿವಾಸ ನಿರ್ಮಿಸಲಾಗುತ್ತಿದೆ. ಸುತ್ತಲೂ ಹಸಿರಿನಿಂದ ಕೂಡಿದೆ. ಈ ಪ್ರಕ್ರಿಯೆಯಲ್ಲಿ ನೀವು ದುರುದ್ದೇಶದ ಆರೋಪ ಮಾಡದೇ ಇದ್ದರೂ ಯೋಜನೆಗೆ ಅಧಿಕಾರಿಗಳು ಈಗಾಗಲೇ ಅನುಮೋದನೆ ನೀಡಿದ್ದಾರೆ’’ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕಾರ್ ಅವರು ಮನವಿಯ ವಿಚಾರಣೆ ನಡೆಸಿ ಹೇಳಿದರು.
‘‘ಈಗ ನಾವು ಉಪರಾಷ್ಟ್ರಪತಿ ಅವರ ನಿವಾಸ ಎಲ್ಲಿರಲಿದೆ ಎಂದು ಸಾಮಾನ್ಯ ಜನರಲ್ಲಿ ಪ್ರಶ್ನಿಸಲು ಆರಂಭಿಸಬೇಕು’’ ಎಂದು ಅವರು ಹೇಳಿದರು. ದೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ರಾಜೀವ್ ಸೂರಿ, ಯೋಜನೆಗೆ ಕೆಲವು ಪ್ರದೇಶಗಳಲ್ಲಿ ಬಳಸಲು ‘ಸಾರ್ವಜನಿಕ ಮನರಂಜನೆ’ ಭೂಮಿಯನ್ನು ‘ವಸತಿ ಪ್ರದೇಶ’ದ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಸಾರ್ವಜನಿಕ ಮರಂಜನೆಗೆ ಮೀಸಲಿರಿಸಿರುವ ಪ್ರದೇಶಕ್ಕೆ ಇದರಿಂದ ಅಡ್ಡಿ ಉಂಟಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಮಗ್ರ ಅಭಿವೃದ್ಧಿಯ ಒಂದು ಭಾಗವಾಗಿ ಕೇಂದ್ರ ಸರಕಾರ ಹಸಿರು ಪ್ರದೇಶವನ್ನು ಹೆಚ್ಚಿಸಲಿದೆ ಎಂದರು. ಅಭಿವೃದ್ಧಿ ಯೋಜನೆಯಲ್ಲಿ ಬದಲಾವಣೆ ತರುವುದು ಅಧಿಕಾರಿಗಳಿಗೆ ಸಂಬಂಧಿಸಿದ ವಿಶೇಷಾಧಿಕಾರ. ಇದು ನೀತಿಗೆ ಸಂಬಂಧಿಸಿದ ವಿಷಯ. ನ್ಯಾಯಾಲಯ ಹಸ್ತಕ್ಷೇಪ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.