ಧರ್ಮದ ಕಾರಣ ಶೇ 33ರಷ್ಟು ಮುಸ್ಲಿಮರು ಆಸ್ಪತ್ರೆಗಳಲ್ಲಿ ತಾರತಮ್ಯ ಎದುರಿಸಿದ್ದರು: ಆಕ್ಸ್ ಫಾಮ್ ಸಮೀಕ್ಷೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ನ 23: ಆಸ್ಪತ್ರೆಗಳಲ್ಲಿ ತಮ್ಮನ್ನು ಧರ್ಮದ ಆಧಾರದಲ್ಲಿ ತಾರತಮ್ಯದಿಂದ ನಡೆಸಿಕೊಂಡಿರುವ ಅನುಭವವಾಗಿದೆ ಎಂದು ಶೇ.33ರಷ್ಟು ಭಾರತೀಯ ಮುಸ್ಲಿಮರು ತಿಳಿಸಿದ್ದಾರೆಂದು ಎನ್ಜಿಓ ಸಂಸ್ಥೆ ಆಕ್ಸ್ಫಾಮ್ ಇಂಡಿಯಾ ಮಂಗಳವಾರ ಬಿಡುಗಡೆಗೊಳಿಸಿದ ಸಮೀಕ್ಷಾ ವರದಿಯೊಂದು ತಿಳಿಸಿದೆ. 28 ರಾಜ್ಯಗಳ ಹಾಗೂ ಐದು ಕೇಂದ್ರಾಡಳಿತ ಪ್ರದೇಶಗಳ 3890 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.22ರಷ್ಟು ಪರಿಶಿಷ್ಟ ಪಂಗಡಗಳವರು, ಶೇ.21ರಷ್ಟು ಪರಿಶಿಷ್ಟ ಜಾತಿಗಳವರು ಹಾಗೂ ಶೇ.15ರಷ್ಟು ಇತರ ಹಿಂದುಳಿದ ವರ್ಗ(ಒಬಿಸಿ) ಗಳಿಗೆ ಸೇರಿದವರು ಕೂಡಾ ಆಸ್ಪತ್ರೆಗಳಲ್ಲಿ ತಾವು ತಾರತಮ್ಯವನ್ನು ಅನುಭವಿಸಿರುವುದಾಗಿ ತಿಳಿಸಿದ್ದಾರೆ.
2018ರಲ್ಲಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಸಿದ್ಧಪಡಿಸಿದ ರೋಗಿಗಳ ಹಕ್ಕುಗಳ ಸನ್ನದನ್ನು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ತರಲಾಗಿದೆ ಎಂಬುದನ್ನು ಅಂದಾಜಿಸಲು ಈ ಸಮೀಕ್ಷೆಯನ್ನು ನಡೆಸಲಾಗಿದೆ. ಈ ಸಮೀಕ್ಷೆಗಾಗಿ 2021ರ ಫೆಬ್ರವರಿಯಿಂದ ಎಪ್ರಿಲ್ವರೆಗೆ ದತ್ತಾಂಶಗಳನ್ನು ಸಂಗ್ರಹಿಸಲಾಗಿತ್ತು. 2019ರ ಜೂನ್ನಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿಯರು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳಿಗೆ ಪತ್ರ ಬರೆದು, ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಸನ್ನದನ್ನು ಜಾರಿಗೊಳಿಸಬೇಕೆಂದು ಸೂಚಿಸಿದ್ದರು.
‘‘ಅಸ್ಪಶತೆ ಎಂಬುದು ಈಗಲೂ ವಾಸ್ತವಿಕವಾಗಿದೆ. ಕೆಲವು ಸಂದರ್ಭಗಳಲ್ಲಿ ವೈದ್ಯರುಗಳು ಈಗಲೂ ದಲಿತ ವ್ಯಕ್ತಿಯ ನಾಡಿಮಿಡಿತವನ್ನು ಪರೀಕ್ಷಿಸಲು ಆತನ ಕೈಯನ್ನು ಹಿಡಿಯಲು ನಿರಾಕರಿಸುತ್ತಾರೆ ಎಂದು ಸಮೀಕ್ಷಾ ತಂಡದ ನೇತೃತ್ವ ವಹಿಸಿದ್ದ ಓಕ್ಸ್ಫಾಮ್ ಇಂಡಿಯಾದ ಶಿಕ್ಷಣ ಹಾಗೂ ಆರೋಗ್ಯ ವಿಭಾಗದ ಮುಖ್ಯಸ್ಥೆ ಆಂಜೆಲಾ ತನೇಜಾ ಹೇಳುತ್ತಾರೆ. ‘‘ ಅದೇ ರೀತಿ ಆದಿವಾಸಿಗಳಿಗೆ ಅರ್ಥವಾಗುವುದಿಲ್ಲವೆಂದು ಭಾವಿಸಿ ವೈದ್ಯರುಗಳು ಅವರಿಗೆ ರೋಗಗಳ ಸ್ವರೂಪ ಹಾಗೂ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುವುದಿಲ್ಲ’’ ಎಂದವರು ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಡ್19 ಹಾವಳಿಯ ಆರಂಭವಾದ ಸಮಯದಲ್ಲಿ ದಿಲ್ಲಿಯಲ್ಲಿ ನಡೆದ ತಬ್ಲಿಗಿ ಜಮಾತ್ ಸಮಾವೇಶದ ಬಳಿಕ ಮುಸ್ಲಿಮರನ್ನು ಗುರಿಯಿರಿಸಿ ವ್ಯಾಪಕವಾಗಿ ದ್ವೇಷದ ಅಭಿಯಾನ ನಡೆಯುತ್ತಿದ್ದುದಾಗಿಯೂ ತನೇಜಾ ಹೇಳಿದ್ದಾರೆ. ‘‘ ಕೊರೋನ ಆರಂಭದ ಸಮಯದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಅನ್ಯಾಯವಾಗಿ ಖಳರೆಂಬಂತೆ ಬಿಂಬಿಲಾಗಿತ್ತು ’’ ಎಂದು ಆಕೆ ತಿಳಿಸಿದ್ದಾರೆ
ಭಾರತದಲ್ಲಿ ಶೇ.35ರಷ್ಟು ಮಹಿಳೆಯರನ್ನು ವೈದ್ಯಕೀಯ ತಪಾಸಣಾ ಕೊಠಡಿಯಲ್ಲಿ ಇನ್ನೋರ್ವ ಮಹಿಳೆಯ ಅನುಪಸ್ಥಿತಿಯಲ್ಲಿ ಪುರುಷ ವೈದ್ಯರು ವೈದ್ಯಕೀಯ ತಪಾಸಣೆ ನಡೆಸುತ್ತಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ರಾಷ್ಟ್ರೀಯ ಮಾನವಹಕ್ಕುಗಳ ಸನ್ನದಿನ ಪ್ರಕಾರ ಮಹಿಳೆಯರ ದೈಹಿಕ ಪರೀಕ್ಷೆ ನಡೆಸುವಾಗ ಇನ್ನೋರ್ವ ಮಹಿಳೆ ಜೊತೆಗಿರುವುದನ್ನು ಆಸ್ಪತ್ರೆಯ ಆಡಳಿತವರ್ಗಖಾತರಿಪಡಿಸಬೇಕಾಗಿದೆ.
ತಮ್ಮ ಅನಾರೋಗ್ಯದ ಬಗ್ಗೆ ತಮಗೆ ವಿವರಣೆಯನ್ನುನೀಡದೆಯೇ ವೈದ್ಯರುಗಳು ತಮಗೆ ಔಷಧಿ ಚೀಟಿಗಳನ್ನು ಬರೆದುಕೊಟ್ಟಿದ್ದಾರೆಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು ತಿಳಿಸಿದ್ದಾರೆ.
ರೋಗಿಗಳ ಹಕ್ಕಿನ ಸನ್ನದಿಗೆ ವ್ಯತಿರಿಕ್ತವಾಗಿ ಆಸ್ಪತ್ರೆಯ ಅಧಿಕಾರಿಗಳು ಶುಲ್ಕ ಪಾವತಿಯಾಗದೆ ಇದ್ದುದಕ್ಕಾಗಿ ಶವಗಳನ್ನು ಅವರ ಬಂಧುಗಳಿಗೆ ಹಸ್ತಾಂತರಿಸಲು ನಿರಾಕರಿಸಿದ್ದಾರೆಂದು ಶೇ.19 ಮಂದಿ ತಿಳಿಸಿದ್ದಾರೆ. ಕೊರೋನ ವೈರಸ್ ಹಾವಳಿಯ ನಡುವೆ ಈ ವರ್ಷದ ಮೇ 14ರಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಪ್ರಕಟಿಸಿದ ಸಲಹಾಪತ್ರವು, ಶುಲ್ಕ ಬಾಕಿಯಿರಿಸಿರುವ ಕಾರಣಕ್ಕಾಗಿ ಆಸ್ಪತ್ರೆಗಳು ಮೃತದೇಹಗಳನ್ನು ಬಂಧುಗಳಿಗೆ ಹಸ್ತಾಂತರಿಸಲು ನಿರಾಕರಿಸಬಾರದೆಂದು ಸೂಚಿಸಿತ್ತು.