ನಂದಿಕೂರಿನಿಂದ ಕೇರಳಕ್ಕೆ ವಿದ್ಯುತ್ ಲೈನ್: ನ. 24ರಂದು ಸರ್ವೇ
ಪಡುಬಿದ್ರಿ: ಉಡುಪಿ ಜಿಲ್ಲೆಯ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರ ಯುಪಿಸಿಎಲ್ ಯೋಜನೆಯಿಂದ ಕೇರಳದ ಕಾಸರಗೋಡಿಗೆ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ಯೋಜನೆಗಾಗಿ ನವೆಂಬರ್ 24ರಂದು ಪ್ರಾಥಮಿಕ ಸರ್ವೇ ನಡೆಸಲು ಜಿಲ್ಲಾಡಳಿತದಿಂದ ಸಿದ್ದತೆಗಳು ನಡೆದಿವೆ.
ಉಡುಪಿ ಜಿಲ್ಲೆಯ 4 ಗ್ರಾಪಂ ವ್ಯಾಪ್ತಿಗಳಲ್ಲಿ ಸುಮಾರು 9 ಟವರ್‍ಗಳು ನಿರ್ಮಾಣವಾಗಲಿರುವ ಮಾಹಿತಿ ಇದೆ. ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಎಲ್ಲೂರು, ಮುದರಂಗಡಿ, ಪಲಿಮಾರು ಹಾಗೂ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಈ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗಲಿದೆ.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಎಲ್ಲೂರು ಗ್ರಾಮ ಪಂಚಾಯಿತಿ, ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಯೋಜನೆಗೆ ಮೊದಲು ಸಾರ್ವಜನಿಕ ಅಹವಾಲು ಸಭೆ ನಡೆಸಬೇಕು. ಯಾವುದೇ ಯೋಜನೆ ಕಾರ್ಯಗತವಾಗುವ ಮೊದಲು ಅಹವಾಲು ಸಭೆ ನಡೆಸಬೇಕೆಂದಿದ್ದರೂ, ಉದ್ದಟತನದಿಂದ ಸರ್ವೇಗೆ ತಯಾರಿ ನಡೆಸುವುದು ಸಮಂಜಸವಲ್ಲ ಎಂದಿದೆ.
ಪಲಿಮಾರು, ಎಲ್ಲೂರು, ಮುದರಂಗಡಿ ಗ್ರಾಪಂನಿಂದ ಪಡುಬಿದ್ರಿ ಪೊಲೀಸ್ ಠಾಣೆಗೆ ಅಕ್ಷೇಪ ಪತ್ರವನ್ನು ಸಲ್ಲಿಸಲಾಗಿದೆ. ಸಾರ್ವಜನಿಕ ಅಹವಾಲು ಸಭೆ ನಡೆಸುವಂತೆ ಈ 3 ಗ್ರಾಮ ಪಂಚಾಯತ್‍ಗಳಿಂದ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‍ರವರಿಗೆ ಪತ್ರ ಬರೆಯಲಾಗಿದೆ. ಹಿಂದೆ ಯುಪಿಸಿಎಲ್‍ನಿಂದ ಹಾಸನ ಜಿಲ್ಲೆ ಶಾಂತಿಗ್ರಾಮಕ್ಕೆ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದಿಂದ ಇಲ್ಲಿನ ಗ್ರಾಮಗಳಲ್ಲಿ ಸಾಕಷ್ಟು ಸಮಸ್ಯೆ ಇನ್ನೂ ಜೀವಂತವಾಗಿದೆ ಎಂದು ಎಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತಕುಮಾರ್ ತಿಳಿಸಿದ್ದಾರೆ.
ಈ ಗ್ರಾಮಗಳಲ್ಲಿ ಈಗಾಗಲೇ ಅಧಿಕ ಸಾಮಥ್ರ್ಯದ ವಿದ್ಯುತ್ ಪ್ರಸರಣ ಮಾರ್ಗಗಳ ನಿರ್ಮಾಣವಾಗಿದ್ದು, ಇದಕ್ಕಾಗಿ ಟವರ್‍ಗಳನ್ನು ನಿರ್ಮಿಸಲಾಗಿದೆ. ಇದರಿಂದ ಈ ಭಾಗದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಟವರ್ 25 ಮೀಟರ್ ಸುತ್ತಳತೆಯಲ್ಲಿ ಯಾವುದೇ ವಸತಿ ಸಹಿತ ಕಾಮಗಾರಿ ನಡೆಸದಂತೆ ಆದೇಶ ನೀಡಲಾಗಿದೆ. ಇದೀಗ ಮತ್ತಷ್ಟು ಟವರ್ ಮತ್ತು ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದಿಂದ ಜನ ಮತ್ತೆ ಸಮಸ್ಯೆಗೊಳಗಾಗಲಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಲಿಮಾರು, ಮುದರಂಗಡಿ ಮತ್ತು ಎಲ್ಲೂರು ಗ್ರಾಮ ಪಂಚಾಯಿತಿಗಳಿಂದ ಈಗಾಗಲೇ ಸರ್ವೇಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಅಕ್ಷೇಪ ಸಲ್ಲಿಸಿದೆ. ಇದೀಗ ಯಾವುದೇ ಮುನ್ಸೂಚನೆ ನೀಡದೆ ಪೊಲೀಸ್ ಬಲದೊಂದಿಗೆ ಪ್ರಾಥಮಿಕ ಸರ್ವೇ ನಡೆಸಲು ತೀರ್ಮಾನಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಸಿದ್ದತೆ ನಡೆಸಿದ್ದಾರೆ.







