ರಾಷ್ಟ್ರೀಯ ಶೂಟಿಂಗ್ ಚಾಂಪಿಯಶಿಪ್‌ಗೆ ಮಂಗಳೂರಿನಿಂದ 8 ಸ್ಪರ್ಧಿಗಳು

ಮಂಗಳೂರು: ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ ವತಿಯಿಂದ ಮಧ್ಯಪ್ರದೇಶ ರಾಜ್ಯ ಶೂಟಿಂಗ್ ಅಕಾಡೆಮಿ ರೇಂಜ್ ಸಹಯೋಗದಲ್ಲಿ ನ.25ರಿಂದ ಡಿ.10 ರವರೆಗೆ ಮತ್ತು ನವದೆಹಲಿಯ ಡಾ. ಕರ್ನಿಸಿಂಗ್ ಶೂಟಿಂಗ್ ಅಕಾಡೆಮಿಯಲ್ಲಿ ಡಿ.6 ರ ವರೆಗೆ ಜರುಗಲಿರುವ 64 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ಮಂಗಳೂರು ರೈಫಲ್ ಕ್ಲಬ್ ನ 8 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಪಿಸ್ತೂಲ್ ಶೂಟರ್‌ಗಳಾದ ಭವಿನ್ ಮೋಹನ್, ಪ್ರೀಮಲ್ ಫುರ್ಟಾಡೋ, ರೈಫಲ್ ಶೂಟರ್‌ಗಳಾದ ಆಧ್ಯಾ ಲಕ್ಷ್ಮೀ, ಲಿಕಿತ್ ಎನ್.ಆರ್., ನಿಹಾಲ್ ಸುವರ್ಣ, ರೋಶನಿ ಸುವರ್ಣ, ಮಾಳವಿಕಾ ಪ್ರಶಾಂತ್ ಮತ್ತು ಕೀರ್ತಿಗಾ ವಿಜಯ್ ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದವರು. ಸ್ಮಾಲ್ ಬೋರ್ ರೈಫಲ್ ವಿಭಾಗದಲ್ಲಿ ಇವರು ಸ್ಪರ್ಧಿಸಲಿದ್ದಾರೆ ಎಂದು ಕ್ಲಬ್ ಮುಖ್ಯ ಕೋಚ್ ಮುಖೇಶ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ಕದ್ರಿಯ ಜುಗುಲ್ ಟವರ್ ನಲ್ಲಿ ಅಕಾಡೆಮಿ ಕಾರ್ಯಾಚರಿಸುತ್ತಿದ್ದು, ಪ್ರಸ್ತುತ 10 ಮೀ. ಏರ್ ಪಿಸ್ತೂಲ್ ಮತ್ತು 10 ಮೀ. ಏರ್ ರೈಫಲ್ಗೆ ಮಾತ್ರ ತರಬೇತಿ ನೀಡಲಾಗುತ್ತಿದೆ. ಮುಂದೆ ಒಲಂಪಿಕ್ ಮಾದರಿಯ 25 ಮೀ.ಮತ್ತು 50 ಮೀ. ಟ್ರ್ಯಾಪ್ ಮತ್ತು ಸ್ಕೇಟ್ ರೇಂಜ್ನೊಂದಿಗೆ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಕರಾವಳಿಯಲ್ಲಿ ಶೂಟಿಂಗ್ ಗೆ ಸಂಬಂಧಿಸಿದಂತೆ ಹೆಚ್ಚಿನ ಒಲವು ಮತ್ತು ಉತ್ತಮ ಸ್ಪರ್ಧಿಗಳನ್ನು ಸಿದ್ಧಗೊಳಿಸುವ ಗುರಿಯೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಕ್ಲಬ್ ಸದಸ್ಯರಾದ ಜಹೀರ್ ಮನ್ನಿಪ್ಪಾಡಿ, ಸಂದೇಶ್ ಸುಧಾಕರ್ ಉಪಸ್ಥಿತರಿದ್ದರು.







