ವಿಧಾನ ಪರಿಷತ್ ಚುನಾವಣೆ: ಒಟ್ಟು 215 ನಾಮಪತ್ರ ಸಲ್ಲಿಕೆ
ಕಣಕ್ಕಿಳಿದ ಸಹೋದರರು

ಬೆಂಗಳೂರು, ನ.23: ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಆಡಳಿತರೂಢ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇನ್ನಿತರ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿ ಒಟ್ಟು 121 ಮಂದಿ 215 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ ಪಕ್ಷದಿಂದ 57, ಕಾಂಗ್ರೆಸ್ ಪಕ್ಷದಿಂದ 56, ಜೆಡಿಎಸ್ ಪಕ್ಷದಿಂದ 17, ಜನತಾ ಪಕ್ಷದಿಂದ 6, ಆಮ್ ಆದ್ಮಿ ಪಕ್ಷದಿಂದ 4, ಜನಹಿತ ಪಕ್ಷದಿಂದ 2, ಜೆಡಿಯು, ಎಸ್‍ಡಿಪಿಐ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಕನ್ನಡ ಚಳವಳಿ ಪಕ್ಷ ಹಾಗೂ ರೈತ ಭಾರತ ಪಕ್ಷದಿಂದ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದೆ.
ಬೀದರ್ ಕ್ಷೇತ್ರದಲ್ಲಿ 6, ಗುಲ್ಬರ್ಗ(ಕಲಬುರಗಿ)-7, ವಿಜಯಪುರ(ಬಿಜಾಪುರ)-19, ಬೆಳಗಾವಿ-19, ಉತ್ತರ ಕನ್ನಡ-9, ಧಾರವಾಡ-24, ರಾಯಚೂರು-12, ಬಳ್ಳಾರಿ-8, ಚಿತ್ರದುರ್ಗ-7, ಶಿವಮೊಗ್ಗ-12, ದಕ್ಷಿಣ ಕನ್ನಡ-14, ಚಿಕ್ಕಮಗಳೂರು-8, ಹಾಸನ-8, ತುಮಕೂರು-11, ಮಂಡ್ಯ-9, ಬೆಂಗಳೂರು-7, ಬೆಂಗಳೂರು ಗ್ರಾಮಾಂತರ-7, ಕೋಲಾರ-8, ಕೊಡಗು-5 ಹಾಗೂ ಮೈಸೂರು ಕ್ಷೇತ್ರದಿಂದ 15 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಳೆ(ನ.24) ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನ.26ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಡಿ.10ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಡಿ.14ರಂದು ಮತಗಳ ಎಣಿಕೆ ಕಾರ್ಯ ನಡೆದು ಅಂದೇ ಫಲಿತಾಂಶವನ್ನು ಪ್ರಕಟಿಸಲಾಗುವುದು.
ಕಣಕ್ಕಿಳಿದ ಸಹೋದರರು: ಧಾರವಾಡ-ಗದಗ-ಹಾವೇರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೆಟ್ಟರ್, ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ, ಪಕ್ಷೇತರ ಅಭ್ಯರ್ಥಿಯಾಗಿ ಶಾಸಕ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ, ವಿಜಯಪುರದಿಂದ ಶಾಸಕ ಎಂ.ಬಿ.ಪಾಟೀಲ್ ಸಹೋದರ ಸುನೀಲ್ ಗೌಡ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಅಚ್ಚರಿಯ ಅಭ್ಯರ್ಥಿಗಳು ಕಣಕ್ಕೆ
ಕಾಂಗ್ರೆಸ್ ಪಕ್ಷವು ಬೆಂಗಳೂರು ನಗರ ಕ್ಷೇತ್ರದಿಂದ ಹಾಲಿ ಸದಸ್ಯ ಎಂ.ನಾರಾಯಣಸ್ವಾಮಿ ಬದಲು ಕೆಜಿಎಫ್ ಬಾಬು ಯಾನೆ ಸ್ಕ್ರಾಪ್ ಬಾಬು ಎಂದು ಚಿರಪರಿಚಿತರಾಗಿರುವ ಯೂಸುಫ್ ಶರೀಫ್ ಅವರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಜೊತೆಗೆ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ದಿನೇಶ್ ಗೂಳಿಗೌಡ ಮಂಡ್ಯ ಕ್ಷೇತ್ರದಿಂದ ಮತ್ತು ಮಾಜಿ ಸಚಿವ, ಬಿಜೆಪಿ ನಾಯಕ ಎ.ಮಂಜು ಅವರ ಪುತ್ರ ಡಾ.ಮಂತರ್ ಗೌಡ ಅವರಿಗೆ ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ.
► ಬಿಜೆಪಿ ಜವಾಬ್ದಾರಿಯಿಂದ ಎ.ಮಂಜು ಮುಕ್ತ
ಇತ್ತೀಚಿನ ಬೆಳವಣಿಗೆಗಳಿಂದ ಕೆಲವು ಸಂಶಯಗಳು ಉಂಟಾಗಿವೆ. ಈ ಕಾರಣದಿಂದ ಪಕ್ಷದ ಮಂಡ್ಯ ಜಿಲ್ಲೆಯ ಪ್ರಭಾರಿ, ಮತ್ತುಳಿದ ಎಲ್ಲ ಜವಾಬ್ದಾರಿಗಳಿಂದ ನಿಮ್ಮನ್ನು ಮುಕ್ತಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್, ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ.ಮಂಜುಗೆ ಪತ್ರ ಬರೆದಿದ್ದಾರೆ.










