ಬೆಂಗಳೂರು: ನ.26ಕ್ಕೆ ಹಂಸಲೇಖ ಬೆಂಬಲಿಸಿ, ಸಂವಿಧಾನ ಜಾಗೃತಿ ಜಾಥಾ

ಬೆಂಗಳೂರು, ನ.23: ಭಾರತ ಸಂವಿಧಾನವು ನಮಗೆ ನೀಡಿರುವ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮ್ಮಿಂದ ಕಸಿದುಕೊಳ್ಳುತ್ತಿರುವುದನ್ನು ಖಂಡಿಸಿ, ಹಂಸಲೇಖರ ಸತ್ಯದ ಮಾತುಗಳನ್ನು ಬೆಂಬಲಿಸಿ, ನಗರದಲ್ಲಿ ನ.26ರಂದು ರಾಜ್ಯಮಟ್ಟದ ಜಾಥಾಕ್ಕೆ ಕರೆ ನೀಡಲಾಗಿದೆ ಎಂದು ಹಿರಿಯ ಕವಿ ಎಲ್.ಎನ್. ಮುಕುಂದರಾಜ್ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ನ.26 ಸಂವಿಧಾನ ಸಮರ್ಪಣಾ ದಿನ ಹಾಗೂ ರಾಷ್ಟ್ರೀಯ ಕಾನೂನು ದಿನ ಆಗಿರುವುದರಿಂದ ನಾವು ಹಂಸಲೇಖರವರನ್ನು ಬೆಂಬಲಿಸಿ `ಹಂಸಲೇಖರನ್ನು ಬೆಂಬಲಿಸಿ ಸಂವಿಧಾನ ಜಾಗೃತಿ ಜಾಥಾ’ ಹಮ್ಮಿಕೊಳ್ಳಲಾಗಿದೆ. ರ್ಯಾಲಿ ಮತ್ತು ಸಮಾವೇಶವು ಯಾವುದೋ ಒಂದು ಸಂಘಟನೆಯ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಆಗಬಾರದೆಂಬ ಕಾರಣದಿಂದ ಕಾರ್ಯಕ್ರಮವನ್ನು `ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ’ ಎಂಬ ಹೆಸರಿನಲ್ಲಿ ಮಾಡಲಾಗುತ್ತಿದೆ. ಜಾಥಾದಲ್ಲಿ ಯಾರೂ ನಾಯಕರಲ್ಲ ಯಾರೂ ಸೇವಕರಲ್ಲ. ಈ ವೇದಿಕೆಯಲ್ಲಿ ಸಂವಿಧಾನವನ್ನು ಗೌರವಿಸುವ ಸಂವಿಧಾನದ ಆಶಯ ಹಕ್ಕುಗಳಿಗೆ ಕುತ್ತು ಬಂದಾಗ ದನಿ ಎತ್ತುವ ಎಲ್ಲರೂ ಈ ಸಮಿತಿಯ ನಾಯಕರು ಮತ್ತು ಸೇವಕರಾಗಬೇಕು ಎಂದು ತಿಳಿಸಿದ್ದಾರೆ.
ರ್ಯಾಲಿಯು ನವೆಂಬರ್ 26 ಬೆಳಗ್ಗೆ 11 ಗಂಟೆಗೆ ನಗರದ ಮೆಜೆಸ್ಟಿಕ್ ಮುಖ್ಯರೈಲು ನಿಲ್ದಾಣದಿಂದ ಹೊರಟು ಫ್ರೀಡಂಪಾರ್ಕ್‍ಗೆ ತಲುಪುತ್ತದೆ. ಈ ರ್ಯಾಲಿಯಲ್ಲಿ ಎಲ್ಲಾ ದಲಿತ, ಹಿಂದುಳಿದ ಸಂಘಟನೆಗಳು ಬಾಗವಹಿಸಲಿದ್ದು, ಫ್ರೀಡಂಪಾಕ್‍ನಲ್ಲಿ ಸಮಾವೇಶ ನಡೆಸಲಾಗುವುದು. ಅಸ್ಪೃಶ್ಯತೆ, ಜಾತೀಯತೆ ವಿರುದ್ಧ ದನಿ ಎತ್ತಿ ಬ್ರಾಹ್ಮಣ್ಯದ ಡೋಂಗಿತನವನ್ನು ಬಯಲು ಮಾಡಿದ ಹಿರಿಯ ಚಿತ್ರಸಾಹಿತಿ ಹಂಸಲೇಖರವರ ಬೆಂಬಲಕ್ಕೆ ನಾವು ನಿಲ್ಲೋಣ ಎಂದು ಹೇಳಿದ್ದಾರೆ.





