ಕುಕ್ಕೆಹಳ್ಳಿಯಲ್ಲಿ ವಿಶ್ವ ಮೀನುಗಾರಿಕಾ ದಿನಾಚರಣೆ

ಉಡುಪಿ: ಉಡುಪಿ ತಾಲೂಕು ಕುಕ್ಕೆಹಳ್ಳಿಯ ಮಹೇಶ್ ಹೆಬ್ಬಾರ್ ಇವರ ಮೀನುಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ವಿಶ್ವ ಮೀನುಗಾರಿಕಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮರಾವ್ ಎಂ., ಮೀನು ಕೃಷಿಕರು ಇಲಾಖೆಯ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಮಾತನಾಡಿ, ಜಿಲ್ಲೆಯಲ್ಲಿ ಸಮುದ್ರ ಮೀನುಗಾರಿಕೆಯ ಜೊತೆಗೆ ಒಳನಾಡು ಮೀನುಗಾರಿಕೆಗೂ ಸಾಕಷ್ಟು ಅವಕಾಶಗಳಿವೆ. ಕೃಷಿಕರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳುವ ಜೊತೆಗೆ ಮೀನುಗಾರಿಕೆಗೆ ಯೋಗ್ಯವಾಗಿರುವ ಗ್ರಾಪಂ ಕೆರೆಗಳನ್ನೂ ಆಯ್ಕೆ ಮಾಡಿಕೊಂಡು ಹೆಚ್ಚು ಮೀನುಕೃಷಿಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು. ಇಲಾಖೆಯ ಮಿಷನ್ ಮಿಲಿಯನ್ ಟನ್ ಮೀನು ಉತ್ಪಾದನಾ ಗುರಿ ತಲುಪಲು ಶ್ರಮವಹಿಸುಂತೆ ಕರೆ ನೀಡಿದರು.
ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್ ಕೆ. ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ್ ಮೀನುಕೃಷಿ ಕುರಿತು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮತ್ಸ್ಯ ವಿಜ್ಞಾನಿ ಶ್ರೀನಿವಾಸ ಹುಲುಕೋಡಿ ಮೀನುಮರಿ ಸಾಕಾಣಿಕೆ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಜಿ.ಎಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಲ್ಪೆ ಮೀನುಗಾರಿಕಾ ಉಪ ನಿರ್ದೇಶಕ ರವಿಕುಮಾರ್ ವಂದಿಸಿದರು. ಬಳಿಕ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅವರು ರಾಕೇಶ್ ಪೂಜಾರಿ ಅವರ ಬಯೋಫ್ಲಾಕ್ ಘಟಕಕ್ಕೆ ಭೇಟಿ ನೀಡಿ, ಮಾಹಿತಿ ಪಡೆದರು.
ಮೀನುಕೃಷಿ ಕೊಳದ ಮಾಲಕ ಮಹೇಶ್ ಹೆಬ್ಬಾರ್, ಮೀನು ಕೃಷಿಕರು ಹಾಗೂ ಮೀನುಾರಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.







