ಮಲ್ಪೆಯಲ್ಲಿ 1.80ಲಕ್ಷ ರೂ.ಗೆ ಮಾರಾಟವಾದ ‘ಘೋಲ್ ಫಿಶ್’!
ಮೀನುಗಾರರ ಬಲೆಗೆ ಬಿದ್ದ ಲಕ್ಷಾಂತರ ಬೆಲೆಬಾಳುವ ಅಪರೂಪದ ಮೀನು

ಉಡುಪಿ: ಲಕ್ಷಾಂತರ ರೂ. ಬೆಲೆಬಾಳುವ ಮೀನೊಂದು ಬಲೆಗೆ ಬಿದ್ದಿರುವುದರಿಂದ ಮಲ್ಪೆ ಮೀನುಗಾರರೊಬ್ಬರಿಗೆ ಅದೃಷ್ಟ ಖುಲಾಯಿಸಿದೆ. ಈ ಮೀನು ಹರಾಜಿನಲ್ಲಿ ಬರೋಬರಿ 1.80ಲಕ್ಷ ರೂ. ಮೊತ್ತಕ್ಕೆ ಮಾರಾಟವಾಗಿದೆ.
ಮಲ್ಪೆಯಿಂದ ಸೋಮವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಶಾನ್‌ರಾಜ್ ತೊಟ್ಟಂ ಎಂಬವರ ಬಲರಾಮ್ ಹೆಸರಿನ ಬೋಟಿನ ಬಲೆಗೆ ಈ ಮೀನು ಸಿಕ್ಕಿದೆ. ಇಂದು ಬೆಳಗ್ಗೆ ಮಲ್ಪೆ ಬಂದರಿನಲ್ಲಿ 20ಕೆ.ಜಿ. ತೂಕದ ಈ ಮೀನು ಹರಾಜಿನಲ್ಲಿ ಕೆ.ಜಿ.ಗೆ 9000ರೂ.ನಂತೆ 1.90ಲಕ್ಷ ರೂ.ಗೆ ಮಾರಾಟವಾಗಿವೆ. ಈ ಮೀನನ್ನು ಮಲ್ಪೆಯ ಎಫ್‌ವೈಝೆಡ್ ಫಿಶ್ ಕಂಪೆನಿಯ ಮಾಲಕ ಫಯಾಝ್ ಖರೀದಿಸಿದ್ದಾರೆ.
ಇದರ ಸಾಮಾನ್ಯ ಹೆಸರು ಘೋಲ್ ಫಿಶ್. ಸ್ಥಳೀಯವಾಗಿ ಗೂಳಿ ಫಿಶ್ ಎಂದು ಕರೆಯಲಾಗುತ್ತದೆ. ಇದು ಬಹಳಷ್ಟು ಬೆಲೆ ಬಾಳುವ ಮೀನು ಆಗಿರುವುದರಿಂದ ಇದನ್ನು ಸೀ ಗೋಲ್ಡ್(ಬಂಗಾರದ ಹೊಟ್ಟೆ) ಎಂದೇ ಪರಿಗಣಿಸಲಾಗುತ್ತದೆ. ಯಾಕೆಂದರೆ ಇದರ ಮಾಂಸ ಬಹಳಷ್ಟು ರುಚಿ ಮತ್ತು ಔಷಧಿಯ ಗುಣಗಳನ್ನು ಹೊಂದಿದೆ. ಅಲ್ಲದೆ ಇದರ ಗಾಳಿ ಚೀಲವು ಸೌಂದರ್ಯವರ್ಧಕ್ಕೆ ಬಳಕೆ ಮಾಡಲಾಗುತ್ತದೆ.
ಕರ್ನಾಟಕದ ಕರಾವಳಿ ಸೇರಿದಂತೆ ಅರಬೀ ಸಮುದ್ರ, ಶ್ರೀಲಂಕಾ, ಆಸ್ಟ್ರೇಲಿಯಾವರೆಗೂ ಈ ಮೀನು ಹಬ್ಬಿಕೊಂಡಿದೆ. ಸುಮಾರು ಒಂದೂವರೆ ಮೀಟರ್‌ವರೆಗೂ ಉದ್ದ ಬೆಳೆಯುವ ಈ ಮೀನು, ಸಮುದ್ರದ ನೆಲಕ್ಕೆ ಹತ್ತಿರವಾಗಿ ತಳಭಾಗದಲ್ಲಿ ಜೀವಿಸುತ್ತದೆ. ಈ ಮೀನು ಒಂದು ಕೆ.ಜಿ.ಗೆ 10ಸಾವಿರ ರೂ.ವರೆಗೆ ಬೆಳೆಬಾಳುತ್ತದೆ. ಈ ಮೀನನ್ನು ಗುರುತಿಸುವಲ್ಲಿ ಕಾರವಾರ ಕರ್ನಾಟಕ ವಿವಿ ಕಡಲ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ. ಶಿವಕುಮಾರ್ ಹರಗಿ ಮತ್ತು ಶ್ರೀಕಾಂತ್ ಜಿ.ಬಿ. ಸಹಕರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮೀನುಗಾರರೊಬ್ಬರಿಗೆ ಒಟ್ಟು 150 ಘೋಲ್ ಫಿಶ್‌ಗಳು ದೊರೆತಿದ್ದು, ಅವುಗಳು ಸುಮಾರು 1.33ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಆ ಮೀನುಗಾರ ಒಂದೇ ದಿನದಲ್ಲಿ ಕೋಟ್ಯಾಧೀಶರಾಗಿದ್ದರು. ಅದೇ ರೀತಿ ಇತ್ತೀಚೆಗೆ ಅಲ್ಲೇ ದೊರೆತ 30ಕೆ.ಜಿ. ತೂಕದ ಒಂದು ಮೀನು ಐದು ಲಕ್ಷಕ್ಕೆ ಮಾರಾಟವಾಗಿದೆ ಎಂದು ಶಿವಕುಮಾರ್ ಮತ್ತು ಶ್ರೀಕಾಂತ್ ಜಿ.ಬಿ. ತಿಳಿಸಿದ್ದಾರೆ.
1.80ಲಕ್ಷ ರೂ.ಗೆ ಖರೀದಿಸಿರುವ ಈ ಮೀನನ್ನು ಮುಂಬೈಗೆ ಮಾರಾಟ ಮಾಡಲಾಗುತ್ತದೆ. ಈ ಮೀನು ನಮಗೆ ದೊರೆಯುತ್ತಿರುತ್ತದೆ. ಈವರೆಗೆ ಗರಿಷ್ಠ ಅಂದರೆ 10ಕೆ.ಜಿ.ವರೆಗಿನ ಮೀನು ದೊರೆಯುತ್ತಿತ್ತು. ಆದರೆ ಇದೇ ಮೊದಲ ಬಾರಿ ಇಷ್ಟು ದೊಡ್ಡ ಮೀನು ದೊರೆತಿದೆ.
-ಫಯಾಝ್, ಮತ್ಸೋದ್ಯಮಿ, ಮಲ್ಪೆ
ಗಾಳಕ್ಕೆ ಬಿದ್ದ 30ಕೆ.ಜಿ. ತೂಕದ ಕಾಂಡೈ!
ಮಲ್ಪೆ ಸಮುದ್ರದಲ್ಲಿ ದೋಣಿಯ ಗಾಳಕ್ಕೆ ಸುಮಾರು 30ಕೆ.ಜಿ. ತೂಕದ ಕಾಂಡೈ ಮೀನು ದೊರೆತಿದೆ. ಮಲ್ಪೆಯ ನವೀನ್ ಸಾಲ್ಯಾನ್ ಎಂಬವರಿಗೆ ಸಂಬಂಧಿಸಿದ ದೋಣಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವಾಗ ಮೊದಲ ಬಾರಿಗೆ ಈ ಬೃಹತ್ ಗಾತ್ರದ ಮೀನು ಸಿಕ್ಕಿದೆ. ಈ ಮೀನು ಕೆ.ಜಿ.ಗೆ 170ರೂ.ನಂತೆ ಹರಾಜಿನಲ್ಲಿ ಮಾರಾಟವಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.








