ಉಡುಪಿ: 76 ಕಳವು ಪ್ರಕರಣಗಳ 90ಲಕ್ಷ ರೂ. ಮೌಲ್ಯದ ಸೊತ್ತುಗಳು ವಾರೀಸುದಾರರಿಗೆ ಹಸ್ತಾಂತರ

ಉಡುಪಿ, ನ.23: ಕಳೆದ ಎರಡು ವರ್ಷಗಳಲ್ಲಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪತ್ತೆ ಹಚ್ಚಲಾದ ಒಟ್ಟು 76 ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಒಟ್ಟು 90.07ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಮಂಗಳವಾರ ವಾರಿೀಸುದಾರರಿಗೆ ಹಸ್ತಾಂತರಿಸಲಾಯಿತು.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಉಡುಪಿ ಚಂದು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, 2020 ಮತ್ತು 2021ನೆ ಸಾಲಿನಲ್ಲಿ ಕಳವಾದ ಸೊತ್ತುಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ವಾರೀಸುದಾರರಿಗೆ ಹಸ್ತಾಂತರಿಸಿದರು.
2020 ಮತ್ತು 2021ನೆ ಸಾಲಿನಲ್ಲಿ ದಾಖಲಾದ ಲಾಭಕ್ಕಾಗಿ ಕೊಲೆ, ಸುಲಿಗೆ, ಹಗಲು ಕಳವು, ರಾತ್ರಿ ಕಳವು, ವಾಹನ ಕಳವು, ಮನೆ ಕಳವು, ಇತರ ಕಳವು ಸೇರಿದಂತೆ ಒಟ್ಟು 312 ಪ್ರಕರಣಗಳ ಪೈಕಿ 76 ಪ್ರಕರಣಗಳನ್ನು ಪತ್ತೆ ಹಚ್ಚ ಲಾಗಿದೆ. ಇದರಲ್ಲಿ ಒಟ್ಟು 57,488,374 ಮೌಲ್ಯದ ಸೊತ್ತುಗಳು ಕಳವಾಗಿದ್ದು, ಇದರಲ್ಲಿ ಒಟ್ಟು 9,078,563ರೂ. ಮೌಲ್ಯದ ಸೊತ್ತುಗಳನ್ನು ಪತ್ತೆ ಹಚ್ಚಲಾಗಿದೆ.
2020ರಲ್ಲಿ ದಾಖಲಾದ ಒಟ್ಟು 151 ಕಳವು ಪ್ರಕರಣಗಳಲ್ಲಿ 45 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ಕಳವಾದ ಒಟ್ಟು 3,13,33,786ರೂ. ಮೌಲ್ಯದ ಸೊತ್ತುಗಳಲ್ಲಿ 58,47,375ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
2021ರಲ್ಲಿ ದಾಖಲಾದ ಒಟ್ಟು 161 ಕಳವು ಪ್ರಕರಣಗಳಲ್ಲಿ 31 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ಕಳವಾದ ಒಟ್ಟು 2,61,54,588 ರೂ. ಮೌಲ್ಯದ ಸೊತ್ತುಗಳ ಪೈಕಿ 32.31,188ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳವಾದ ಸೊತ್ತುಗಳಲ್ಲಿ ನಗದು, ಚಿನ್ನಾಭರಣ, ಬೆಳ್ಳಿಯ ಆಭರಣ, ಟಿಪ್ಪರ್, ಟೆಂಪೋ, ದ್ವಿಚಕ್ರ ವಾಹನ, ಅಟೋ ರಿಕ್ಷಾ, ನಗದು, ಲ್ಯಾಪ್‌ಟಾಪ್, ಮೊಬೈಲ್, ಬ್ಯಾಟರಿಗಳು ಪ್ರಮುಖವಾಗಿದ್ದವು.
ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್ಪಿಗಳಾದ ಸುಧಾಕರ್ ಎಸ್.ನಾಯ್ಕಿ, ವಿಜಯ ಪ್ರಸಾದ್‌ಷ ಪೊಲೀಸ್ ನಿರೀಕ್ಷಕರಾದ ಸಂಪತ್ ಕುಮಾರ್, ಪ್ರಮೋದ್ ಕುಮಾರ್, ಮಂಜುನಾಥ್, ಅನಂತಪದ್ಮನಾಭ ಹಾಗೂ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಕಳೆದ ಎರಡು ವರ್ಷಗಳಲ್ಲಿ ವಶಪಡಿಸಿಕೊಂಡ ಸೊತ್ತುಗಳನ್ನು ನ್ಯಾಯಾಲಯದಿಂದ ಅನುಮತಿ ಪಡೆದು ವಾರೀಸುದಾರಿಗೆ ಹಸ್ತಾಂತರ ಮಾಡಿದ್ದೇವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ರಾತ್ರಿ ಕಳವುಗಿಂತ ಹಗಲು ಕಳವು ಪ್ರಕರಣಗಳು ಹೆಚ್ಚಾಗಿವೆ. ಅದೇ ರೀತಿ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಇಳಿಕೆಯಾಗಿವೆ. ಇನ್ನು ಮುಂದೆಯೂ ರಾತ್ರಿ ಬೀಟ್‌ಗಳು ಮುಂದುವರೆಯುತ್ತದೆ. ಎರಡು ಮೂರು ದಿನಗಳ ಕಾಲ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಮನೆಯವರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಬೀಟ್ ಸಿಬ್ಬಂದಿಗಳು ಮನೆ ಕಡೆ ನಿಗಾ ವಹಿಸುತ್ತಾರೆ. ಇದರಿಂದ ಕಳ್ಳತನ ಪ್ರಕರಣಗಳನ್ನು ತಪ್ಪಿಸಬಹುದಾಗಿದೆ.
-ಎನ್.ವಿಷ್ಣುವಧನ್, ಎಸ್ಪಿ, ಉಡುಪಿ








