ಬಿಬಿಸಿ ಸಾಕ್ಷ್ಯಚಿತ್ರಕ್ಕೆ ರಾಜವಂಶದ ತೀವ್ರ ಆಕ್ರೋಶ

photo:twitter
ಲಂಡನ್, ನ.23: ರಾಜಕುಮಾರ ಹ್ಯಾರಿ ಮತ್ತವರ ಪತ್ನಿ ಮೆಘನ್ ಅರಸೊತ್ತಿಗೆಯ ಕರ್ತವ್ಯವನ್ನು ತ್ಯಜಿಸುವ ಮೊದಲು ತೆರೆಮರೆಯಲ್ಲಿ ಬಹಳಷ್ಟು ಸಂಘರ್ಷ ನಡೆದಿತ್ತು ಎಂದು ಪ್ರತಿಪಾದಿಸುವ ಬಿಬಿಸಿಯ ಸಾಕ್ಷ್ಯಚಿತ್ರವನ್ನು ವಿರೋಧಿಸಿ ಬ್ರಿಟನ್ನ ರಾಜಮನೆತದ ಪ್ರಮುಖರು ಅಪರೂಪದ ಜಂಟಿ ಹೇಳಿಕೆ ಹೊರಡಿಸಿದ್ದಾರೆ.
1997ರಲ್ಲಿ ತಮ್ಮ ತಾಯಿ ಡಯಾನಾ ಮೃತಪಟ್ಟ ಬಳಿಕ ಹ್ಯಾರಿ ಮತ್ತವರ ಹಿರಿಯ ಸಹೋದರ ಮಾಧ್ಯಮದವರನ್ನು ಹೇಗೆ ನಿಭಾಯಿಸಿದರು ಎಂಬ ಬಗ್ಗೆ ‘ದಿ ಪ್ರಿನ್ಸಸ್ ಆ್ಯಂಡ್ ದಿ ಪ್ರೆಸ್’ ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ. ಈ ಸಾಕ್ಷ್ಯಚಿತ್ರದ ಮೊದಲ 2 ಕಂತು ಸೋಮವಾರ ರಾತ್ರಿ ಪ್ರಸಾರವಾಗಿದೆ.
ಹ್ಯಾರಿ ಮಾಧ್ಯಮದವರನ್ನು ಕಂಡರೆ ಉರಿದು ಬೀಳುತ್ತಿದ್ದರು. ಅಮೆರಿಕದ ನಟಿ ಮೆಘನ್ ಮಾರ್ಕ್ಲ್ರನ್ನು ಪ್ರೀತಿಸಿ 2016ರಲ್ಲಿ ವಿವಾಹವಾದ ಬಳಿಕ ಮಾಧ್ಯಮದವರು ದಂಪತಿಯ ಬಗ್ಗೆ ಪ್ರಕಟಿಸಿದ ವರದಿಯಿಂದ ಅವರ ಈ ಅಸಹನೆ ಮತ್ತಷ್ಟು ತೀವ್ರಗೊಂಡಿತ್ತು . ಆರಂಭದಲ್ಲಿ ಜನಪ್ರಿಯರಾಗಿದ್ದ ಹ್ಯಾರಿ ಮತ್ತು ಮೆಘನ್ ಬಗ್ಗೆ ಅರಮನೆಯ ಒಳಗಿನ ಕೆಲ ವ್ಯಕ್ತಿಗಳು ಮಾಧ್ಯಮಗಳಿಗೆ ನಿರಂತರ ಮಾಹಿತಿ ಒದಗಿಸುತ್ತಿದ್ದು, ಅರಮನೆಯ ಗೋಡೆಯ ಮರೆಯಲ್ಲಿ ಅಧಿಕಾರಕ್ಕೆ ಕಿತ್ತಾಟ ನಡೆದಿದೆ ಎಂಬ ನಕಾರಾತ್ಮಕ ವಿವರ ಒದಗಿಸುತ್ತಿದ್ದರು ಎಂದು ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಮೆಘಾನ್ಗೆ ರಾಜವಂಶದ ಹಲವರೊಂದಿಗೆ ದ್ವೇಷವಿತ್ತು ಎಂದೂ ಉಲ್ಲೇಖಿಸಲಾಗಿದೆ.
ಬಕಿಂಗ್ಹ್ಯಾಮ್ ಅರಮನೆ, ಕ್ಲಾರೆನ್ಸ್ ಹೌಸ್ ಮತ್ತು ಕೆನ್ಸಿಂಗ್ಟನ್ ಅರಮನೆ (ಅನುಕ್ರಮವಾಗಿ ರಾಣಿ ಎಲಿಜಬೆತ್ ದ್ವಿತೀಯ, ಅವರ ಪುತ್ರ ಯುವರಾಜ ಚಾರ್ಲ್ಸ್ ಮೊಮ್ಮಗ ವಿಲಿಯಂರನ್ನು ಪ್ರತಿನಿಧಿಸುತ್ತವೆ) ಈ ಸಾಕ್ಷ್ಯಚಿತ್ರದ ಬಗ್ಗೆ ತೀವ್ರ ಅಸಮಾಧಾನ ಸೂಚಿಸಿದ್ದು , ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡುವ ಮೊದಲು ತಮಗೆ ತೋರಿಸಲು ಬಿಬಿಸಿ ನಿರಾಕರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಮುಕ್ತ, ಜವಾಬ್ದಾರಿಯುತ ಮತ್ತು ಸ್ವತಂತ್ರ ಮಾಧ್ಯಮವು ಆರೋಗ್ಯಯುತ ಪ್ರಜಾಪ್ರಭುತ್ವಕ್ಕೆ ಬಹು ಮುಖ್ಯವಾಗಿದೆ.
ಅದರೆ ಕೆಲವೊಮ್ಮೆ ಇದು ಮಿತಿಮೀರುತ್ತದೆ ಮತ್ತು ಅನಧಿಕೃತ ಮೂಲದಿಂದ ಲಭಿಸುವ ಆಧಾರರಹಿತ ಪ್ರತಿಪಾದನೆಯನ್ನು ವಾಸ್ತವ ಎಂದು ಬಿಂಬಿಸುವುದು, ಮತ್ತು ಇದಕ್ಕೆ ಬಿಬಿಸಿ ಸೇರಿದಂತೆ ಯಾರಾದರೂ ವಿಶ್ವಸನೀಯತೆ ತೋರುವುದು ಅತ್ಯಂತ ಬೇಸರದ ವಿಷಯವಾಗಿದೆ ಎಂದು ಈ ಮೂರು ರಾಜಮನೆತನದವರ ಜಂಟಿ ಹೇಳಿಕೆ ತಿಳಿಸಿದೆ.
ಸಾಕ್ಷ್ಯಚಿತ್ರದಲ್ಲಿ ಪ್ರತಿಪಾದಿಸಿದ ಆರೋಪದ ಬಗ್ಗೆ ಬಕಿಂಗ್ಹಾಮ್ ಅರಮನೆ ಆಂತರಿಕ ವಿಚಾರಣೆ ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ. ಈ ಮಧ್ಯೆ, ಮೆಘಾನ್ ಅವರ ವಕೀಲರು ಈ ಪ್ರತಿಪಾದನೆಗಳನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.







