ಭಾರತದಲ್ಲಿ ಕೋವಿಡ್ 3ನೇ ಅಲೆಯ ಬೃಹತ್ ಹಾವಳಿಯ ಸಾಧ್ಯತೆಯಿಲ್ಲ: ತಜ್ಞರ ಅಭಿಪ್ರಾಯ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ನ.23: ಭಾರತವು ಭೀಕರವಾದ ಕೋವಿಡ್ ಬಿಕ್ಕಟ್ಟಿನಿಂದ ಪಾರಾಗಿರುವ ಸಾಧ್ಯತೆಗಳು ಅಧಿಕವಾಗಿವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ದೀಪಾವಳಿಯ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಒಂದೇ ಸಮನೆ ಇಳಿಕೆ ಕಂಡುಬಂದಿರುವುದು ಇದರ ಸೂಚನೆಯಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಕೋವಿಡ್ ಎರಡನೆ ಅಲೆಯ ಸಂದರ್ಭದಲ್ಲಿ ದೇಶದ ಒಂದು ದೊಡ್ಡ ವರ್ಗವು ಕೊರೋನ ವೈರಸ್ನ ಸಂಪರ್ಕಕ್ಕೊಳಗಾಗಿರುವುದು ಹಾಗೂ ದೇಶಾದ್ಯಂತ ಲಸಿಕಾ ಅಭಿಯಾನ ಚುರುಕು ಗೊಂಡಿರುವುದು ಕೋವಿಡ್ ಹಾವಳಿ ಕ್ಷೀಣಿಸುತ್ತಿರುವುದಕ್ಕೆ ಕಾರಣವೆಂದು ಅವರು ಹೇಳಿದ್ದಾರೆ.
ಆದರೆ ಚಳಿಗಾಲದ ಆರಂಭವಾಗುತ್ತಿದ್ದಂತೆ ದೇಶದ ವಿವಿಧ ಭಾಗಗಳಲ್ಲಿ ವೇಗವಾಗಿ ಹರಡಬಲ್ಲಂತಹ ಕೊರೋನ ವೈರಸ್ನ ಹೊಸ ಪ್ರಭೇದ ಕಾಣಿಸಿಕೊಳ್ಳುವ ಸಾಧ್ಯತೆಯಿದೆಯಾದರೂ, ಈ ಮೂರನೆ ಅಲೆಯು ಎರಡನೆ ಅಲೆಯಷ್ಟು ಹಾನಿಮಾಡಲಾರದು ಎಂದವರು ಭರವಸೆ ವ್ಯಕ್ತಪಡಿಸಿದ್ದಾರೆ.
ಪ್ರಾಯಶಃ ಡಿಸೆಂಬರ್- ಫೆಬ್ರವರಿ ಅವಧಿಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುವ ಸಂಭವವಿದೆಯಾದರೂ, ಅದರ ಪರಿಣಾಮವು ಭಾರತವು ಎರಡನೆ ಅಲೆಯ ಸಂದರ್ಭದಲ್ಲಿ ಅನುಭವಿಸಿದ್ದಕ್ಕಿಂತ ತುಂಬಾ ಸೌಮ್ಯವಾಗಿರುವುದು ಎಂದು ಸೋನೆಪತ್ನ ಅಶೋಕಾ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಭಾಗದ ಪ್ರೊಫೆಸರ್ ಗೌತಮ್ ಮೆನನ್ ವಿವರಿಸುತ್ತಾರೆ.
ಹಬ್ಬಗಳ ಋತುವಾದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಬೃಹತ್ ಸಭೆ, ಸಮಾರಂಭಗಳು ನಡೆಯುವುದರಿಂದ ಆ ಅವಧಿಯಲ್ಲಿ ಮೂರನೆ ಅಲೆ ಉತ್ತುಂಗಕ್ಕೆ ತಲುಪಲಿದೆಯೆಂದು ಹಲವಾರು ಸೋಂಕುರೋಗ ತಜ್ಞರು ಆತಂಕ ವ್ಯಕ್ತಪಡಿಸಿದ್ದರಾದರೂ, ಅದೃಷ್ಟವಶಾತ್ ಹಾಗೆ ಆಗುವುದು ತಪ್ಪಿದೆ ಎಂದು ಮೆನನ್ ಹೇಳಿದ್ದಾರೆ.
ಕಳೆದ 46 ದಿನಗಳಿಂದ ಕೊರೋನ ಸೋಂಕಿನ ಪ್ರಕರಣಗಳ ದೈನಂದಿನ ಸಂಖ್ಯೆ 20 ಸಾವಿರದ ಕೆಳಗೆಯೇ ಉಳಿದುಕೊಂಡಿದೆ ಹಾಗೂ ಸತತ 149 ದಿನಗಳಿಂದ ದೈನಂದಿನ ಸೋಂಕಿನ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆಯಾಗಿದೆ.
ಮಂಗಳವಾರದಂದು ಭಾರತದಲ್ಲಿ 7759 ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದ್ದು,, ಇದು ಕಳೆದ 543 ದಿನಗಳಲ್ಲಿಯೇ ಅತ್ಯಂತ ಕಡಿಮೆಯಾಗಿದೆ. ಭಾರತದಲ್ಲಿ ಈ ತನಕ 3,45,26,480 ಪ್ರಕರಣಗಳು ವರದಿಯಾಗಿವೆ.