ಕೃಷಿ ಕಾಯ್ದೆ ವರದಿ ಸಾಮಾಜಿಕ ತಾಣಗಳಲ್ಲಿ ಬಿಡುಗಡೆಗೆ ಆಗ್ರಹಿಸಿ ಸಿಜೆಐಗೆ ಘನಾವತ್ ಪತ್ರ

ಹೊಸದಿಲ್ಲಿ,ನ.23: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮೂರು ಕೃಷಿ ಕಾಯ್ದೆಗಳ ಮೂರು ಕೃಷಿ ಕಾನೂನುಗಳ ಪರಿಶೀಲನಾ ಸಮಿತಿ ಸಲ್ಲಿಸಿದ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಬೇಕೆಂದು ಸುಪ್ರೀಂಕೋರ್ಟ್ ನಿಯೋಜಿಸಿದ್ದ ಸಮಿತಿಯ ಸದಸ್ಯರಲ್ಲೊಬ್ಬರಾದ ಅನಿಲ್ ಘನಾವತ್ ಅವರು ಮಂಗಳವಾರ ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದಿದ್ದಾರೆ.
ಪತ್ರವನ್ನು ಸಾಧ್ಯವಿದ್ದಷ್ಟು ಬೇಗನೆ ಬಿಡುಗಡೆಗೊಳಿಸಬೇಕು, ಇಲ್ಲದೆ ಇದ್ದಲ್ಲಿ ಹಾಗೆ ಮಾಡಲು ಸಮಿತಿಗೆ ಅಧಿಕಾರ ನೀಡುವಂತೆಯೂ ಶೇತ್ಕರಿ ಸಂಘಟನಾದ ಹಿರಿಯ ನಾಯಕರೂ ಆಗಿರುವ ಘನಾವತ್, ಕೋರಿದ್ದಾರೆ. ಕೇಂದ್ರವು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದರೂ ಕೂಡಾ ದೇಶಕ್ಕೆ ಅಗತ್ಯವಾಗಿ ಬೇಕಾಗಿರುವ ಕೃಷಿ ಸುದಾರಣಾ ಕಾನೂನುಗಳ ಜಾರಿಗೆ ಆಗ್ರಹಿಸಿ ಮುಂದಿನ ಒಂದೆರಡು ತಿಂಗಳುಗಳಲ್ಲಿ ದಿಲ್ಲಿಗೆ ಒಂದು ಲಕ್ಷ ರೈತರ ಜಾಥಾವನ್ನು ನಡೆಸುವುದಾಗಿಯೂ ತಿಳಿಸಿದರು.
ಕನಿಷ್ಠ ಬೆಂಬಲ ಬೆಲೆಯನ್ನು ನೀಡಬೇಕೆಂಬ ರೈತರ ಬೇಡಿಕೆಗೆ ಕಾನೂನಾತ್ಮಕ ಖಾತರಿಯಿದೆ ಎಂದು ಹೇಳಿದ ಅವರು ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಒದಗಿಸುವುದು ಕಾರ್ಯಸಾಧ್ಯವಲ್ಲ ಎಂದರು.
ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆದ ಬಳಿಕ ಸಮಿತಿಯ ವರದಿಯು ಅಪ್ರಸಕ್ತವಾಗುತ್ತದೆ. ಆದರೆ ಸಮಿತಿಯು ಮಾಡಿರುವ ಶಿಫಾರಸುಗಳು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದರು.
ಈ ಮೂರು ಕೃಷಿ ಕಾನೂನುಗಳು ಅಸ್ತಿತ್ವವನ್ನು ಕಳೆದುಕೊಂಡ ಬಳಿಕವೂ ಅವುಗಳಲ್ಲಿರುವ 'ಸುಧಾರಣೆಗಾಗಿನ ತುಡಿತವು' ಕರಗಿಹೋಗಬಾರದು ಎಂದು ಘನಾವತ್ ಪತ್ರದಲ್ಲಿ ಹೇಳಿದ್ದಾರೆ.
ಸಮಿತಿಯ ವರದಿಯು ಶೈಕ್ಷಣಿಕ ಪಾತ್ರವನ್ನು ಕೂಡಾ ನಿರ್ವಹಿಸಬಹುದಾಗಿದ್ದು, ಕೃಷಿ ಕಾನೂನುಗಳ ಬಗ್ಗೆ ಹಲವಾರು ರೈತರಿಗಿರುವ ತಪ್ಪು ತಿಳುವಳಿಕೆಗಳನ್ನು ದೂರವಾಗಿಸಲಿದೆ. ನನ್ನ ಅಭಿಪ್ರಾಯದ ಪ್ರಕಾರ ಈ ರೈತರು ಕೆಲವು ರೈತ ಮುಖಂಡರಿಂದ ತಪ್ಪು ದಾರಿಗೆಳೆಯಲ್ಪಟ್ಟಿದ್ದಾರೆ ಎಂದರು.
ಈ ಮೂವರು ಸದಸ್ಯರ ಸಮಿತಿಯು ಸುಪ್ರೀಂಕೋರ್ಟ್ ಗೆ ತನ್ನ ವರದಿಯನ್ನು ಮಾರ್ಚ್ 19ರಂದು ಸಲ್ಲಿಸಿತ್ತು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಅಭಿವೃದ್ಧಿ ಹೊಂದಿದ ದೇಶಗಳು ಅನುಸರಿಸುತ್ತಿರುವ ಉತ್ಕೃಷ್ಟ ಹಾಗೂ ದೃಢವಾದ ನೀತಿಯನ್ನು ಕೇಂದ್ರ ಸರಕಾರವು ಸುಧಾರಣೆಗೊಳಿಸಬೇಕು ಹಾಗೂ ಅನುಷ್ಠಾನಕ್ಕೆ ತರಬೇಕೆಂದು ಅವರು ಆಗ್ರಹಿಸಿದರು. ನೂತನ ಕೃಷಿ ಕಾಯ್ದೆಗಳ ರದ್ದತಿಯಿಂದಾಗಿ ಭಾರೀ ಸಂಖ್ಯೆಯ ರೈತರು ಹತಾಶರಾಗಿದ್ದಾರೆ ಎಂದವರು ತಿಳಿಸಿದ್ದಾರೆ. ನೂತನ ಕೃಷಿ ಕಾನೂನುಗಳನ್ನು ರೂಪಿಸುವುದಕ್ಕಾಗಿ ಶ್ವೇತಪತ್ರವೊಂದನ್ನು ಸಿದ್ಧಪಡಿಸಲು ಸಮಿತಿಯೊಂದನ್ನು ಸ್ಥಾಪಿಸಬೇಕೆಂದು ಘನಾವತ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.







