ಆನ್‍ಲೈನ್ ಜೂಜು ನಿಷೇಧ: ಹೈಕೋರ್ಟ್‍ನಲ್ಲಿ ಬಲವಾಗಿ ಸಮರ್ಥಿಸಿಕೊಂಡ ರಾಜ್ಯ ಸರಕಾರ

ಬೆಂಗಳೂರು, ನ.23: ರಾಜ್ಯದಲ್ಲಿ ಆನ್‍ಲೈನ್ ಜೂಜು ಮತ್ತು ಬೆಟ್ಟಿಂಗ್ ನಿಷೇಧಿಸುವ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆಗೆ ವಿಧಾನಸಭೆ ಅಂಗೀಕಾರ ನೀಡಿರುವುದನ್ನು ರಾಜ್ಯ ಸರಕಾರ ಹೈಕೋರ್ಟ್‍ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.
ರಾಜ್ಯದಲ್ಲಿ ಆನ್‍ಲೈನ್ ಗೇಮ್ ರದ್ದುಪಡಿಸಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಹಾಗೂ ಇತರೆ ಗೇಮಿಂಗ್ ಕಂಪೆನಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠಕ್ಕೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಅವರು ಆನ್‍ಲೈನ್ ಜೂಜು ನಿಷೇಧವನ್ನು ಸಮರ್ಥಿಸಿಕೊಂಡರು.
ಸ್ಕಿಲ್ ಗೇಮ್(ಕೌಶಲ್ಯ ಆಟ)ಗಳನ್ನು ರಾಜ್ಯ ಸರಕಾರ ಒಪ್ಪಿಕೊಳ್ಳುವುದಿಲ್ಲ. ಆನ್‍ಲೈನ್ ಜೂಜು ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಅರ್ಹತೆ ಹೊಂದಿಲ್ಲ ಮತ್ತು ವಜಾಗೊಳಿಸಲು ಅರ್ಹವಾಗಿವೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.