ನ.28ರಂದು ‘ಕ್ರಾಂತಿ ಸೂರ್ಯ ಭಗತ್‌ಸಿಂಹ’ ಎಂಬ ಯಕ್ಷಗಾನ ಪ್ರಸಂಗ
ಮಂಗಳೂರು, ನ. 23: ಭಾರತದ ಸ್ವಾತಂತ್ರ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂಸ್ಕಾರ ಭಾರತಿಯು ದೇಶಭಕ್ತಿಗೆ ಸಂಬಂಧಿಸಿದ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ‘ಕ್ರಾಂತಿ ಸೂರ್ಯ ಭಗತ್‌ಸಿಂಹ’ ಎಂಬ ಯಕ್ಷಗಾನ ಪ್ರಸಂಗವನ್ನು ನ.28ರಂದು ಬೆಳಗ್ಗೆ 9 ಗಂಟೆಗೆ ನಗರದ ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮಂಗಳೂರು ಸಂಸ್ಕಾರ ಭಾರತಿ ಅಧ್ಯಕ್ಷ ಪುರುಷೋತ್ತಮ ಕೆ.ಭಂಡಾರಿ ಅಡ್ಯಾರು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲೆ ಮತ್ತು ಸಾಹಿತ್ಯಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಕಾರ ಭಾರತಿಯ ಮಂಗಳೂರು ಘಟಕದ ವತಿಯಿಂದ ನಡೆಯುವ ಈ ಯಕ್ಷಗಾನದಲ್ಲಿ ತೆಂಕು ತಿಟ್ಟುವಿನ ಯಕ್ಷಗಾನ ಕಲಾವಿದರು ಭಾಗವಹಿಸುವರು. ಪ್ರಸಿದ್ಧ ಪ್ರಸಂಗ ರಚನಾಕಾರರಾದ ಪ್ರಸಾದ್ ಮೊಗೆಬೆಟ್ಟು ಅವರು ಭಗತ್‌ಸಿಂಹ ಅವರ ಜೀವನ ಚರಿತ್ರೆಯನ್ನು ಪ್ರಸಂಗ ರೂಪದಲ್ಲಿ ರಚಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಇದು ಮೊದಲ ಪ್ರಯೋಗವಾಗಿದ್ದು, ಪ್ರಥಮ ಪ್ರಯೋಗ ಬಡಗುತಿಟ್ಟಿನಲ್ಲಿ ನಡೆದಿದೆ. ಈ ಪ್ರಸಂಗ ಸುಮಾರು ಮೂರೂವರೆ ಗಂಟೆ ಕಾಲ ಪ್ರದರ್ಶನಗೊಳ್ಳಲಿದೆ. 23ರ ಹರೆಯದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರನ ಜೀವನ ಕತೆ ಇದಾಗಿದೆ ಎಂದರು.
ಈ ಸಂದರ್ಭ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತಿ ದಕ್ಷಿಣ ಭಾರತದ ಅಧ್ಯಕ್ಷ ಸುಚೇಂದ್ರ ಪ್ರಸಾದ್ ವಹಿಸುವರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸುವರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಕೋಶಾಧಿಕಾರಿ ಸಿ.ಎ. ಸುದೇಶ್ ಕುಮಾರ್ ರೈ ಭಾಗವಹಿಸುವರು ಎಂದರು.
ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಾಧವ ಭಂಡಾರಿ, ಸಂಘಟನಾ ಕಾರ್ಯದರ್ಶಿ ಆರ್.ಗಣೇಶ್, ಪ್ರಚಾರ ಪ್ರಮುಖ್ ಸುಜೀರ್ ವಿನೋದ್ ಇದ್ದರು.







