ನ.26-27: ಯೆನೆಪೋಯದಿಂದ ನರ್ಸಿಂಗ್ ರಾಷ್ಟ್ರೀಯ ಸಮ್ಮೇಳನ
ಮಂಗಳೂರು, ನ.23: ಯೆನೆಪೋಯ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಟ್ಟ ಯೆನೆಪೋಯ ನರ್ಸಿಂಗ್ ಕಾಲೇಜು ಮತ್ತು ಭಾರತದ ಶುಶ್ರೂಷಕರ ಸಂಶೋಧನಾ ಸೊಸೈಟಿಯ ಜಂಟಿ ಆಶ್ರಯದಲ್ಲಿ 'ಸಂಶೋಧನಾ ಬರಹಗಳ ಮೂಲಕ ನರ್ಸಿಂಗ್ ಪಾಂಡಿತ್ಯವನ್ನು ಬಲಪಡಿಸುವುದು' ಎಂಬ ವಿಷಯದಲ್ಲಿ 24ನೇ ರಾಷ್ಟ್ರೀಯ ಸಮ್ಮೇಳನ ನ.26 ಮತ್ತು 27ರಂದು ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ. ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೋಷಿಯೋ ಬಿಹೇವಿಯರ್ ಆ್ಯಂಡ್ ಹೆಲ್ತ್ ಸಿಸ್ಟಮ್ ರಿಸರ್ಚ್‌ನ ಮುಖ್ಯಸ್ಥ, ವಿಜ್ಞಾನಿ ಡಾ. ಬೋಂತ ವಿ. ಬಾಬು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಯೆನೆಪೋಯ ಉಪ ಕುಲಪತಿ ಡಾ. ಎಂ. ವಿಜಯಕುಮಾರ್ ಉಪಸ್ಥಿತರಿರುವರು.
ಎರಡೂ ದಿನದ ಸಮ್ಮೇಳನದಲ್ಲಿ ದೇಶದ 300ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಲು ನೋಂದಣಿ ಮಾಡಿದ್ದಾರೆ. 150ಕ್ಕೂ ಹೆಚ್ಚು ಪೇಪರ್ ಪ್ರಸ್ತುತಿ, ಪ್ರದರ್ಶನ ನೋಂದಣಿಯಾಗಿದೆ. ಕಾರ್ಯಕ್ರಮ ಆನ್‌ಲೈನ್ ಮುಖೇನವೂ ಪ್ರಸಾರವಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೆನಿಟಾ, ನಿತ್ಯಾ, ಡಾ. ಪ್ರಿಯಾ ರೇಶ್ಮಾ ಅರನ್ಹ ಇದ್ದರು.





