ಸಿಕ್ಖರ ವಿರುದ್ಧ ಅವಹೇಳನಕಾರಿ ಹೇಳಿಕೆ ನಟಿ ಕಂಗನಾ ರಣಾವತ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು

ಮುಂಬೈ, ನ. 23: ಸಾಮಾಜಿಕ ಜಾಲ ತಾಣದ ಪೋಸ್ಟ್‌ನಲ್ಲಿ ಸಿಕ್ಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ಆರೋಪದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ವಿರುದ್ಧ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ. ದಿಲ್ಲಿ ಸಿಕ್ಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ಕಂಗನಾ ರಣಾವತ್ ವಿರುದ್ಧ ದೂರು ದಾಖಲಿಸಿದ ದಿನದ ಬಳಿಕ ಉಪನಗರ ಖಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಡಿಎಸ್‌ಜಿಎಂಸಿ ನಿಯೋಗದ ಭಾಗವಾಗಿದ್ದ ಮುಂಬೈ ಮೂಲದ ಉದ್ಯಮಿ ಅಮರ್‌ಜೀತ್ ಸಿಂಗ್ ಸಂಧು ಅವರು ಸೋಮವಾರ ಈ ದೂರು ದಾಖಲಿಸಿದ್ದರು. ದೂರಿನಲ್ಲಿ ಸಂಧು, ಇನ್‌ಸ್ಟಾಗ್ರಾಂನಲ್ಲಿ ಕಂಗನಾ ರಣಾವತ್ ತನ್ನ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ದೂರು ಸಲ್ಲಿಸಿದ ಬಳಿಕ ಶಿರೋಮಣಿ ಅಕಾಲಿ ದಳ (ಎಸ್‌ಡಿಎ)ದ ನಾಯಕ ಹಾಗೂ ಡಿಎಸ್‌ಜಿಎಂಸಿಯ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಅವರ ನೇತೃತ್ವದ ಡಿಎಸ್‌ಜಿಎಂಸಿ ನಿಯೋಗ ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟಿಲ್ ಹಾಗೂ ಮುಂಬೈ ಪೊಲೀಸ್‌ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದೆ ಹಾಗೂ ಕಂಗನಾ ರಣಾವತ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.