ಬೆಂಗಳೂರು: `ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ
ಸ್ಥಳ ಪರಿಶೀಲನೆ ನಡೆಸಿದ ಸಚಿವರಾದ ಅಶ್ವತ್ಥನಾರಾಯಣ, ವಿ.ಸೋಮಣ್ಣ

ಬೆಂಗಳೂರು, ನ.23: ನಗರದ ಜ್ಞಾನಭಾರತಿ ಆವರಣದಲ್ಲಿ ನಿರ್ಮಿಸಿರುವ `ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ’ ನೂತನ ಕ್ಯಾಂಪಸ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಅದರ ಪೂರ್ವ ತಯಾರಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ವಸತಿ ಸಚಿವ ವಿ.ಸೋಮಣ್ಣ ಮಂಗಳವಾರ ಪರಿಶೀಲಿಸಿದರು.
ನಂತರ ಅಧಿಕಾರಿಗಳ ಜತೆಯೂ ಚರ್ಚಿಸಿದ ಸಚಿವರು ತಕ್ಷಣದಿಂದಲೇ ಸಿದ್ಧತೆಗಳನ್ನು ಆರಂಭಿಸಬೇಕು ಎಂದು ಸೂಚಿಸಿದರು. ಮುಖ್ಯಮಂತ್ರಿ ಕಚೇರಿಯ ಮೂಲಗಳ ಪ್ರಕಾರ ಪ್ರಧಾನಿ ಡಿ.6ರಂದು ಬರುವ ಸಾಧ್ಯತೆ ಇದೆ.
`ಕಟ್ಟಡದ ಬಹುತೇಕ ಕೆಲಸಗಳು ಮುಗಿದಿದೆ. ಬಾಕಿ ಇರುವ ಸಣ್ಣಪುಟ್ಟ ಕೆಲಸಗಳನ್ನು ಆದ್ಯತೆಯ ಮೇಲೆ ಮುಗಿಸಲಾಗುವುದು. ಈ ಉನ್ನತ ಸಂಸ್ಥೆಯಲ್ಲಿ ಅಂಬೇಡ್ಕರ್ ಅವರ ಆಶಯದಂತೆ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕೊಡಲಾಗುವುದು. ಸ್ವತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಅಂಬೇಡ್ಕರ್ ಅವರ ಸದಾಶಯಗಳನ್ನು ಇಲ್ಲಿ ಈಡೇರಿಸಲಾಗುವುದು' ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಅಂಬೇಡ್ಕರ್ ಹೆಸರಿನಲ್ಲಿರುವ ಈ ಸಂಸ್ಥೆಯಲ್ಲಿ ವಿಶ್ವ ಮಟ್ಟದ ಬೋಧನೆ ಮತ್ತು ಸಂಶೋಧನೆಗೆ ಒತ್ತು ಕೊಡಲಾಗುವುದು. ಈ ಮೂಲಕ ಸಮಾಜದಲ್ಲಿ ದಮನಿತರ ಸಬಲೀಕರಣಕ್ಕೆ ಹೊಸ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದು ಇಡೀ ಕ್ಯಾಂಪಸ್ಸನ್ನು ಸುತ್ತು ಹಾಕಿದ ಅವರು ಹೇಳಿದರು.
ಈ ಸಂಸ್ಥೆಯು ಇಡೀ ರಾಜ್ಯಕ್ಕೆ ಒಂದು ಹೆಮ್ಮೆಯ ಸಂಗತಿಯಾಗಿದೆ. ಇಂಥ ಒಂದು ಸಂಸ್ಥೆಯ ಉದ್ಘಾಟನೆಗೆ ಪ್ರಧಾನಿ ಆಗಮಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಅಂಬೇಡ್ಕರ್ ಅವರ ಮಹಾಪರಿನಿರ್ವಾಣದ ದಿನವೇ ಸಂಸ್ಥೆಯು ಲೋಕಾರ್ಪಣೆಗೊಳ್ಳುತ್ತಿರುವುದು ಅವರಿಗೆ ಸಲ್ಲಿಸುತ್ತಿರುವ ಗೌರವವಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ವಿಶ್ವವಿದ್ಯಾಲಯದ ಕುಲಪತಿ ಡಾ.ಭಾನುಮೂರ್ತಿ ಮತ್ತು ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.







