ನವೆಂಬರ್ 29ರಂದು ಸಂಸತ್ತಿಗೆ 60 ಟ್ರ್ಯಾಕ್ಟರ್ ರ‍್ಯಾಲಿ: ರಾಕೇಶ್ ಟಿಕಾಯತ್

ಕೌಶಂಬಿ (ಗಾಜಿಯಾಬಾದ್): ಬೆಳೆಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸಬೇಕು ಎಂದು ಒತ್ತಾಯಿಸಿ, ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗುವ ನವೆಂಬರ್ 29ರಂದು ಸಂಸತ್ತಿಗೆ 60 ಟ್ರ್ಯಾಕ್ಟರ್‌ಗಳ ಮೂಲಕ ರ‍್ಯಾಲಿಯಲ್ಲಿ ತೆರಳಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
"ನವೆಂಬರ್ 29ರಂದು 60 ಟ್ರ್ಯಾಕ್ಟರ್‌ಗಳು ಸಂಸತ್ತಿಗೆ ಜಾಥಾದಲ್ಲಿ ತೆರಳಲಿವೆ. ಸರ್ಕಾರ ಮುಕ್ತಗೊಳಿಸಿದ ರಸ್ತೆಗಳ ಮೂಲಕವೇ ಟ್ರ್ಯಾಕ್ಟರ್‌ಗಳು ತೆರಳಲಿವೆ. ರಸ್ತೆ ತಡೆ ನಡೆಸುವ ಬಗ್ಗೆ ನಮ್ಮ ಮೇಲೆ ಆರೋಪವಿದೆ. ನಾವು ಹಾಗೆ ಮಾಡುವುದಿಲ್ಲ. ರಸ್ತೆ ತಡೆ ನಡೆಸುವುದು ನಮ್ಮ ಚಳವಳಿಯಲ್ಲ. ವಾಸ್ತವವಾಗಿ ನಮ್ಮ ಚಳವಳಿ ಸರ್ಕಾರದ ಜತೆ ಮಾತುಕತೆಗಾಗಿ. ನಾವು ನೇರವಾಗಿ ಸಂಸತ್ತಿಗೆ ತೆರಳಲಿದ್ದೇವೆ" ಎಂದು ಟಿಕಾಯತ್ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ನೀಡಿದ ಹೇಳಿಕೆಗೆ ಅನುಸಾರ, ಹೊಸ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ನಿರ್ಧಾರಕ್ಕೆ ಬುಧವಾರ ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆಯುವ ನಿರೀಕ್ಷೆ ಇದ್ದು, ಇದರ ನಡುವೆಯೇ ಟಿಕಾಯತ್ ಹೇಳಿಕೆ ಮಹತ್ವ ಪಡೆದಿದೆ.
ಹಿಂದಿನ ಸಲ 200 ರೈತರು ಸಂಸತ್ತಿಗೆ ತೆರಳಿದ್ದಕ್ಕಿಂತ ಭಿನ್ನವಾಗಿ ಈ ಬಾರಿ ಸಾವಿರಾರು ಮಂದಿ ರೈತರು ಸಂಸತ್ತಿಗೆ ಜಾಥಾ ನಡೆಸಲಿದ್ದಾರೆ ಎಂದು ಅವರು ವಿವರಿಸಿದರು. ಎಂಎಸ್‌ಪಿ ಕುರಿತ ಸರ್ಕಾರದ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಕಳೆದ ಒಂದು ವರ್ಷದಲ್ಲಿ ಪ್ರತಿಭಟನೆ ವೇಳೆ 750 ರೈತರು ಮೃತಪಟ್ಟಿದ್ದಾರೆ. ಸರ್ಕಾರ ಇದರ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 29ರಿಂದ ಡಿಸೆಂಬರ್ 23ರವರೆಗೆ ನಡೆಯಲಿದೆ.