ಭಾರತೀಯ ಕ್ರಿಕೆಟಿಗರ ಮೆನುವಿನಿಂದ ಬೀಫ್, ಪೋರ್ಕ್ ಔಟ್!

ಹೊಸದಿಲ್ಲಿ, ನ.24: ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ಆಗಮಿಸಿರುವ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಕಾನ್ಪುರದಲ್ಲಿ ಕೇವಲ ಹಲಾಲ್ ಮಾಂಸವನ್ನು ಮಾತ್ರ ಬಿಸಿಸಿಐ ಶಿಫಾರಸು ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಪಿಟಿಐಗೆ ಲಭ್ಯವಾಗಿರುವ ಕೇಟರಿಂಗ್ ಮತ್ತು ಮೆನು ದಾಖಲೆಗಳ ಪ್ರಕಾರ, ಯಾವುದೇ ಬಗೆಯ ವೈವಿಧ್ಯಮಯ ಆಹಾರದ ಹೆಸರಿನಲ್ಲಿ ಯಾವುದೇ ಪೋರ್ಕ್ (ಹಂದಿಮಾಂಸ) ಮತ್ತು ಬೀಫ್ (ಗೋಮಾಂಸ) ಇರುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ಶಿಫಾರಸನ್ನು ತಕ್ಷಣ ಹಿಂಪಡೆಯಬೇಕು ಎಂದು ಬಿಜೆಪಿ ವಕ್ತಾರ ಮತ್ತು ವಕೀಲ ಗೌರವ್ ಗೋಯಲ್ ಆಗ್ರಹಿಸಿದ್ದಾರೆ.
"ಆಟಗಾರರು ತಮಗೆ ಇಷ್ಟವಾದ್ದನ್ನು ಸೇವಿಸಬಹುದು. ಆದರೆ ಹಲಾಲ್ ಮಾಂಸವನ್ನು ಪರಿಚಯಿಸುವ ಅಧಿಕಾರವನ್ನು ಬಿಸಿಸಿಐಗೆ ನೀಡಿದವರು ಯಾರು? ಇದು ಕಾನೂನುಬಾಹಿರ ಹಾಗೂ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ" ಎಂದು ಗೋಯಲ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ. "ಈ ನಿರ್ಧಾರ ಸರಿಯಲ್ಲ. ತಕ್ಷಣ ವಾಪಸ್ ಪಡೆಯಬೇಕು" ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಲು ಮುಂದಾದಾಗ, ಮೆನು ದಾಖಲೆ ಬಗ್ಗೆ ಯಾರೂ ಪ್ರತಿಕ್ರಿಯೆ ನೀಡಲು ಸಿದ್ಧರಿಲ್ಲ. ಬಹುಶಃ ಆಟಗಾರರ ಆಹಾರ ಕ್ರಮದ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮೆನುವನ್ನು ಬೆಂಬಲ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡ ಸಿದ್ಧಪಡಿಸಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಹಿಂದೂ ಹಾಗೂ ಸಿಕ್ಖ್ ಆಟಗಾರರು ’ಝಾತ್ಕ’ ಮಾಂಸವನ್ನು ಇಷ್ಟಪಟ್ಟರೆ, ಮುಸ್ಲಿಮರು ಹಲಾಲ್ ಇಷ್ಟಪಡುತ್ತಾರೆ.
ಈ ಮೊದಲು ದಾಖಲೆಯಲ್ಲಿ ಸೇರಿರದಿದ್ದರೂ, ಗೋಮಾಂಸ ಹಾಗೂ ಹಂದಿಮಾಂಸದ ಖಾದ್ಯಗಳನ್ನು ಮೆನುವಿನಿಂದ ಹೊರಗಿಟ್ಟಿರುವುದು ಅಚ್ಚರಿಯಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಹೇಳಿದ್ದಾರೆ. ಕಡಿಮೆ ಪ್ರೊಟೀನ್ ಹೊಂದಿದ ಗ್ರಿಲ್ಡ್ ಚಿಕನ್ ಮತ್ತು ಮೀನನ್ನು ಹೆಚ್ಚಾಗಿ ಬಳಸುತ್ತಿದ್ದೆವು. ಬೀಫ್ ಮತ್ತು ಪೋರ್ಕನ್ನು ಡ್ರೆಸ್ಸಿಂಗ್ ರೂಮ್ನಲ್ಲಿ ವಿತರಿಸುತ್ತಿರಲಿಲ್ಲ ಎಂದು ಅವರು ವಿವರಿಸಿದ್ದಾರೆ.