ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಗೆ ಕೇಂದ್ರ ಸಂಪುಟ ಅಂಗೀಕಾರ: ವರದಿ
ಸಂಸತ್ನ ಚಳಿಗಾಲದ ಅಧಿವೇಶನದ ಸಂದರ್ಭ ಮಂಡನೆ

ಹೊಸದಿಲ್ಲಿ, ನ. 24: ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಮಸೂದೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿತು. ಈ ಮಸೂದೆ ಸಂಸತ್ತಿನ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದು ಘೋಷಿಸಿದ್ದರು. ಕೃಷಿ ವಲಯದ ಸುಧಾರಣೆಯ ಪ್ರಯೋಜನಗಳ ಬಗ್ಗೆ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮನವರಿಕೆ ಮಾಡಲು ಸರಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದರು. ಪ್ರತಿಭಟನೆ ನಿಲ್ಲಿಸುವಂತೆ ಹಾಗೂ ಮನೆಗೆ ಮರಳುವಂತೆ ಅವರು ಪ್ರತಿಭಟನೆ ನಡೆಸುತ್ತಿದ್ದ ರೈತರಲ್ಲಿ ಮನವಿ ಮಾಡಿದ್ದರು.
ಕೃಷಿ ವಲಯದಲ್ಲಿ ಸುಧಾರಣೆ ತರುವ ಉದ್ದೇಶದೊಂದಿಗೆ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಈ ಮೂರು ಕೃಷಿ ಕಾಯ್ಯೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಔಪಚಾರಿಕತೆಯನ್ನು ಸಂಪುಟ ಪೂರ್ಣಗೊಳಿಸಿದೆ ಎಂದು ಕಾನೂನು, ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ‘‘ಸಂಸತ್ತಿನ ಮುಂದಿನ ಅಧಿವೇಶನದಲ್ಲಿ, ಈ ಮೂರು ಕಾಯ್ದೆಗಳನ್ನು ಹಿಂಪಡೆಯುವುದು ನಮ್ಮ ಆದ್ಯತೆಯಾಗಿರಲಿದೆ’’ ಎಂದು ಅವರು ಹೇಳಿದ್ದಾರೆ.
ಚಳಿಗಾಲದ ಅಧಿವೇಶನ ನವೆಂಬರ್ 29ರಂದು ಆರಂಭವಾಗಲಿದ್ದು, ಡಿಸೆಂಬರ್ 23ಕ್ಕೆ ಅಂತ್ಯವಾಗಲಿದೆ. ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಕೆಲವು ದಿನಗಳ ಬಳಿಕ ಕೃಷಿ ಕಾಯ್ದೆಗಳ ರದ್ದುಪಡಿಸುವ ಮಸೂದೆ-2021ಕ್ಕೆ ಅನುಮೋದನೆ ನೀಡಲಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭ ಈ ಮಸೂದೆ ಮಂಡನೆಯಾಗಲಿದೆ. ಇದರೊಂದಿಗೆ ಕ್ರಿಪ್ಟೋ ಕರೆನ್ಸಿ ಸೇರಿದಂತೆ ಇತರ 25 ಮಸೂದೆಗಳು ಕೂಡ ಮಂಡನೆಯಾಗಲಿದೆ. ಈ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬುದು ಕಳೆದ ಸುಮಾರು ಒಂದು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಒಕ್ಕೂಟದ ಪ್ರಮುಖ ಆಗ್ರಹವಾಗಿತ್ತು.