ಉತ್ತರಪ್ರದೇಶ: ಕಾಂಗ್ರೆಸ್ ಬಂಡಾಯ ಶಾಸಕಿ ಅದಿತಿ ಸಿಂಗ್ ಬಿಜೆಪಿಗೆ ಸೇರ್ಪಡೆ

Photo: ANI
ಲಕ್ನೊ: ರಾಯ್ ಬರೇಲಿ ಕ್ಷೇತ್ರದ ಕಾಂಗ್ರೆಸ್ ನ ಬಂಡಾಯ ಶಾಸಕಿ ಅದಿತಿ ಸಿಂಗ್ ಅವರು ಬುಧವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು.
ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ಲಕ್ನೋದಲ್ಲಿ ಪತ್ರಿಕಾಗೋಷ್ಠಿ ಕರೆದರು. ಈ ವೇಳೆ ಅದಿತಿ ಸಿಂಗ್ ಅವರು ಬಿಜೆಪಿ ಸೇರಿದರು.
2022ರ ಉತ್ತರಪ್ರದೇಶ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ಕಳೆದುಹೋದ ರಾಜಕೀಯ ನೆಲೆಯನ್ನು ಮರಳಿ ಪಡೆಯಲು ಹೆಣಗಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬೆಳವಣಿಗೆಯು ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಯ್ ಬರೇಲಿ ಕ್ಷೇತ್ರದಲ್ಲಿ ಅದಿತಿ ಸಿಂಗ್ ಅವರ ಕುಟುಂಬವು ಸುಮಾರು ಮೂರು ದಶಕಗಳಿಂದ ತನ್ನ ಹಿಡಿತವನ್ನು ಹೊಂದಿದೆ. ಅದಿತಿಯ ತಂದೆ, ದಿವಂಗತ ಅಖಿಲೇಶ್ ಸಿಂಗ್ 1993 ರಿಂದ 2007 ರವರೆಗೆ ಕಾಂಗ್ರೆಸ್ ಶಾಸಕರಾಗಿದ್ದರು. 2007 ರಲ್ಲಿ ಕಾಂಗ್ರೆಸ್ ಅವರನ್ನು ಉಚ್ಚಾಟಿಸಿದ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರು. ಅದಿತಿ 2017ರಲ್ಲಿ ಕಾಂಗ್ರೆಸ್ ಟಿಕೆಟ್ ನಲ್ಲಿ ಈ ಸ್ಥಾನವನ್ನು ಗೆದ್ದುಕೊಂಡಿದ್ದರು.
Next Story





