63 ಕೋಳಿಗಳ ಸಾವಿಗೆ ಕಾರಣವಾದ ಮದುವೆ ಮೆರವಣಿಗೆ: ಎಫ್ ಐಆರ್ ದಾಖಲು

ಸಾಂದರ್ಭಿಕ ಚಿತ್ರ (PTI)
ಭುವನೇಶ್ವರ: ಸಂಗೀತ, ನೃತ್ಯ ಪಟಾಕಿ ಮತ್ತು ಹೊಳೆಯುವ ಜಾಕೆಟ್ಗಳಲ್ಲಿ ಬ್ರಾಸ್ ಬ್ಯಾಂಡ್ ನೊಂದಿಗೆ ನಡೆದ ಸಾಂಪ್ರದಾಯಿಕ ಭಾರತೀಯ ವಿವಾಹ ಮೆರವಣಿಗೆಯು 63 ಕೋಳಿಗಳ ಸಾವಿಗೆ ಕಾರಣವಾಗಿದೆ ಎಫ್ ಐಆರ್ ನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ರವಿವಾರ ಮಧ್ಯರಾತ್ರಿಯ ಸ್ವಲ್ಪ ಮೊದಲು ಪೂರ್ವ ರಾಜ್ಯ ಒಡಿಶಾದಲ್ಲಿರುವ ತನ್ನ ಕೋಳಿ ಫಾರ್ಮ್ ಬಳಿ ಮದುವೆ ಮೆರವಣಿಗೆ ಹಾದುಹೋದಾಗ "ಕಿವಿ ಸೀಳುವ ಶಬ್ದ ಕೇಳಿ ಬಂದಿತ್ತು. ಸಂಗೀತವು ತುಂಬಾ ಗದ್ದಲದಿಂದ ಕೂಡಿದ್ದು ಕೋಳಿಗಳನ್ನು ಭಯಭೀತಗೊಳಿಸುತ್ತಿದ್ದರಿಂದ ಧ್ವನಿಯನ್ನು ಕಡಿಮೆ ಮಾಡಲು ನಾನು ಬ್ಯಾಂಡ್ ನಿರ್ವಾಹಕರನ್ನು ಕೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ ಹಾಗೂ ವರನ ಸ್ನೇಹಿತರು ನನ್ನನ್ನು ಗದರಿಸಿದರು” ಎಂದು ರಂಜಿತ್ ಕುಮಾರ್ ಪರಿದಾ AFP ಗೆ ತಿಳಿಸಿದರು.
ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ ಎಂದು ಪಶುವೈದ್ಯರು ರಂಜಿತ್ ಕುಮಾರ್ ಗೆ ತಿಳಿಸಿದರು. ಮದುವೆಯ ಮನೆಯವರು ಪರಿಹಾರವನ್ನು ನೀಡಲು ನಿರಾಕರಿಸಿದ ನಂತರ ಅವರು ಪೊಲೀಸ್ ದೂರು ದಾಖಲಿಸಿದರು.
ಪ್ರಾಣಿಗಳ ನಡವಳಿಕೆಯ ಕುರಿತು ಪುಸ್ತಕವನ್ನು ಬರೆದಿರುವ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕ ಸೂರ್ಯಕಾಂತ ಮಿಶ್ರಾ, ಜೋರಾಗಿ ಕೇಳುವ ಶಬ್ದವು ಪಕ್ಷಿಗಳಲ್ಲಿ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹಿಂದೂಸ್ತಾನ್ ಟೈಮ್ಸ್ ಗೆ ಹೇಳಿದ್ದಾರೆ.





