ಪ್ರೊ.ಶಿವರಾಮ ಶೆಟ್ಟಿ, ಸೀತಾರಾಮ ಕಟೀಲ್ಗೆ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ

ಪ್ರೊ. ಶಿವರಾಮ ಶೆಟ್ಟಿ, ಸೀತಾರಾಮ ಕುಮಾರ್ ಕಟೀಲ್
ಉಡುಪಿ, ನ. 24: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಉಡುಪಿ ಘಟಕದ ವತಿಯಿಂದ ನೀಡಲಾಗುವ ಈ ಬಾರಿಯ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಗಳಿಗೆ ಪ್ರೊ.ಬಿ.ಶಿವರಾಮ ಶೆಟ್ಟಿ ಹಾಗೂ ಸೀತಾರಾಮ ಕುಮಾರ್ ಕಟೀಲ್ ಇವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಜನಪದ ವಿದ್ವಾಂಸರೂ, ಮೈಸೂರು ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾಗಿರುವ ಪ್ರೊ. ಬಿ.ಶಿವರಾಮ ಶೆಟ್ಟಿ ಅವರನ್ನು ಜಾನಪದ ವಿದ್ವಾಂಸ ಪ್ರಶಸ್ತಿಗೂ, ಯಕ್ಷಗಾನದ ಹಾಸ್ಯ ಕಲಾವಿದರೂ, ಹೂವಿನಕೋಲು, ಚಿಕ್ಕಮೇಳ ತಂಡಗಳ ನಿರ್ವಾಹಕರೂ ಆಗಿರುವ ಸೀತಾರಾಮ ಕಟೀಲ್ ಇವರನ್ನು ಜನಪದ ಕಲಾವಿದ ಪ್ರಶಸ್ತಿಗೂ ಆಯ್ಕೆ ಮಾಡಲಾಗಿದೆ ಎಂದು ಯುವವಾಹಿನಿಯ ಮಾಜಿ ಅಧ್ಯಕ್ಷ ಸಂತೋಷ ಕುಮಾರ್ ಅವರು ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರೂ, ಕನಕ ಅಧ್ಯಯನ ಪೀಠದ ನಿರ್ದೇಶಕರಾಗಿ ದುಡಿದು ಕನಕ ತತ್ವ ಸಂದೇಶಗಳನ್ನು ನಾಡಿನಾದ್ಯಂತ ಪ್ರಸರಣ ಮಾಡಿದ ಪ್ರೊ.ಶೆಟ್ಟಿ, 50ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜನಪದ ಕುರಿತು ಹಲವು ಸಾಹಿತ್ಯ ಕೃತಿ ಹಾಗೂ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ.
ಯಕ್ಷಗಾನ ರಂಗದ ಚಾರ್ಲಿ ಚಾಪ್ಲಿನ್ ಎಂದೇ ಖ್ಯಾತಿ ಪಡೆದಿರುವ ಸೀತಾರಾಮ ಕಟೀಲ್, ಸದ್ಯ ಹೊಸನಗರ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ದುಡಿುುತಿದ್ದಾರೆ. ಯಕ್ಷಗಾನ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ 2018ರಲ್ಲಿ ರಾಜ್ಯ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ಆಯ್ಕೆಯನ್ನು ನಡೆಸಿದೆ ಎಂದು ಸಂತೋಷ್ ಕುಮಾರ್ ಹೇಳಿದರು.
ನ.28ರ ರವಿವಾರ ಬೆಳಗ್ಗೆ 10:30ಕ್ಕೆ ಚಿಟ್ಪಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್ನ ಲಕ್ಷ್ಮೀ ಸಭಾಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ತೆಂಕನಿಡಿಯೂರು ಸರಕಾರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿರುವ ಡಾ.ಸುರೇಶ್ ರೈ ಕೆ. ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅದೇ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ದುಗ್ಗಪ್ಪ ಕಜೆಕಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ.
2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಜನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಹಾಗೂ ಯುವ ವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕೆ.ರಾಜೀವ ಪೂಜಾರಿ ಅವರು ಉಪಸ್ಥಿತರಿರುವರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ಪ್ರವೀಣ್ ಡಿ. ಪೂಜಾರಿ ಅಧ್ಯಕ್ಷತೆ ವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್ ಡಿ.ಪೂಜಾರಿ, ಸಂಚಾಲಕ ಭಾಸ್ಕರ್ ಸುವರ್ಣ, ಮಾಜಿ ಅಧ್ಯಕ್ಷ ರಘುನಾಥ ಮಾಬಿಯಾನ್, ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು.







