ಇಳಿವಯಸ್ಸಿನಲ್ಲಿ ಹೆತ್ತವರ ಜೀವನ ನಿರ್ವಹಣೆಗೆ ನೆರವು ನೀಡುವುದು ಪುತ್ರನ ನೈತಿಕ, ಕಾನೂನಾತ್ಮಕ ಕರ್ತವ್ಯ: ಸುಪ್ರೀಂ

ಹೊಸದಿಲ್ಲಿ: ತನ್ನ 72 ವರ್ಷದ ಅನಾರೋಗ್ಯ ಪೀಡಿತ ತಂದೆಗೆ ಮಾಸಿಕ ಜೀವನಾಂಶವಾದ ರೂ. 10,000 ಪಾವತಿಸಲು ಸಾಧ್ಯವಿರುವ ಎಲ್ಲಾ ನೆಪಗಳನ್ನು ಮುಂದೊಡ್ಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಮಂಗಳವಾರ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆಯಲ್ಲದೆ ಹೆತ್ತವರಿಗೆ ಅವರ ಇಳಿವಯಸ್ಸಿನಲ್ಲಿ ಜೀವನ ನಿರ್ವಹಣೆಗೆ ಸಹಾಯ ಮಾಡುವುದು ಪುತ್ರನೊಬ್ಬನ ನೈತಿಕ ಮತ್ತು ಕಾನೂನಾತ್ಮಕ ಕರ್ತವ್ಯವಾಗಿದೆ ಎಂದು ಹೇಳಿದೆ.
ರಾಜಧಾನಿಯ ನಿವಾಸಿಯಾಗಿರುವ 72 ವರ್ಷದ ವ್ಯಕ್ತಿಗೆ ಇಬ್ಬರು ಪುತ್ರರು ಹಾಗೂ ಆರು ಪುತ್ರಿಯರಿದ್ದು ಕೃಷ್ಣನಗರದಲ್ಲಿ 30 ಚದರ ಯಾರ್ಡ್ ಮನೆಯಲ್ಲಿ ತನ್ನ ಹಿರಿಯ ಪುತ್ರನೊಂದಿಗೆ ವಾಸಿಸುತ್ತಿದ್ದಾರೆ. ಮನೆ ಈಗಾಗಲೇ ಕುಟುಂಬ ಸದಸ್ಯರ ನಡುವೆ ಹಂಚಿಕೆಯಾಗಿದ್ದರೂ ವಿವಾಹಿತ ಪುತ್ರಿಯರು ತಮ್ಮ ಪಾಲನ್ನು ಬಿಟ್ಟುಕೊಟ್ಟಿದ್ದರಿಂದ ವೃದ್ಧರಿಗೆ ತಮ್ಮದೆಂದು ಹೇಳಬಹುದಾದ ಸಣ್ಣ ಸ್ಥಳವಿತ್ತು. ಆದರೆ ಜೀವನ ನಿರ್ವಹಣೆಗೆ ಇಬ್ಬರು ಪುತ್ರರಿಂದಲೂ ಈ ಹಿರಿಯ ನಾಗರಿಕನಿಗೆ ಯಾವುದೇ ಸಹಾಯ ಒದಗಿ ಬಂದಿರಲಿಲ್ಲ. ಹಿಂದೆ ಬಡಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರಿಗೆ ಈಗ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ.
ಪುತ್ರರಿಂದ ಸಹಾಯ ಬಾರದೇ ಇದ್ದುದರಿಂದ ಅವರು 2015ರಲ್ಲಿ ಕುಟುಂಬ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು ಹಾಗೂ ಗುತ್ತಿಗೆದಾರ ಹಾಗೂ ರಿಯಲ್ ಎಸ್ಟೇಟ್ ವೃತ್ತಿಯ ಪುತ್ರನಿಂದ ಜೀವನಾಂಶ ಕೋರಿದ್ದರು. ನ್ಯಾಯಾಲಯ ಆರಂಭದಲ್ಲಿ ಅವರಿಗೆ ರೂ. 6000 ಮಾಸಿಕ ಜೀವನಾಂಶ ನೀಡಬೇಕೆಂದು ಆದೇಶಿಸಿತ್ತು ಹಾಗೂ 2015ರಿಂದ ಬಾಕಿ ಮೊತ್ತ ರೂ 1.68 ಲಕ್ಷ ಪಾವತಿಸುವಂತೆ ಹೇಳಿದ್ದರೂ ಆತ ಕೇವಲ ರೂ 50,000 ಪಾವತಿಸಿದ್ದ. ನಂತರ ನ್ಯಾಯಾಲಯ ಜೀವನಾಂಶವನ್ನು ರೂ. 10,000ಕ್ಕೆ ಏರಿಸಿತ್ತು.
ಆದರೆ ಪುತ್ರ ನ್ಯಾಯಾಲಯದ ಮೊರೆ ಹೋಗಿ ನಂತರ ಸುಪ್ರೀಂ ಕೋರ್ಟ್ ತನಕವೂ ಹೋಗಿದ್ದ ಹಾಗೂ ತನ್ನ ಪತ್ನಿಯ ಆಸ್ತಿ ತನ್ನ ಸಂಪತ್ತೆಂದು ವಿಚಾರಣಾ ನ್ಯಾಯಾಲಯ ತಪ್ಪಾಗಿ ತಿಳಿದುಕೊಂಡಿತ್ತು ಎಂದು ವಾದಿಸಿದ್ದ.
ಆದರೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ ಹಿರಿಯ ನಾಗರಿಕರ ಪರ ತೀರ್ಪು ನೀಡಿ “ನಿಮ್ಮ ತಂದೆಗೆ 72 ವರ್ಷ ಹಾಗೂ ರೂ. 10,000 ಜೀವನಾಂಶ ವಿಚಾರದಲ್ಲಿ ಅವರನ್ನು ಕೋರ್ಟಿಗೆ ನೀವು ಎಳೆದಿದ್ದೀರಿ? ನಿಮಗೇನಾಗಿದೆ? ಯಾರು ಕೂಡ ತಮ್ಮ ಹೆತ್ತವರನ್ನು ಕೋರ್ಟಿಗೆಳೆಯಬಾರದು. ಯಾವ ಹಿರಿಯ ನಾಗರಿಕರೂ ಈ ಪರಿಸ್ಥಿತಿ ಎದುರಿಸಬಾರದು,'' ಎಂದು ಹೇಳಿದೆ.