ಕ್ರೀಡೆಯಿಂದ ಸೌಹಾರ್ದ ಮನೋಭಾವ ವೃದ್ಧಿ: ಡಾ.ವಿನಾಯಕ್ ಶೆಣೈ

ಉಡುಪಿ, ನ.24: ಪ್ರತಿಯೊಬ್ಬರೂ ದೈಹಿಕವಾಗಿ ಸದೃಢರಾಗಲು ಕ್ರೀಡೆ ಅತೀ ಅವಶ್ಯಕ. ಕ್ರೀಡೆಯಿಂದ ಆರೋಗ್ಯ ವೃದ್ಧಿಗೊಳ್ಳು ವುದಲ್ಲದೆ ಮಾನಸಿಕವಾಗಿ ಶಕ್ತರಾಗುತ್ತೇವೆ. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಸೌಹಾರ್ದ ಮನೋಭಾವ ಬೆಳೆಯಲು ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷ ಡಾ.ವಿನಾಯಕ್ ಶೆಣೈ ಹೇಳಿದ್ದಾರೆ.
ಜಿಲ್ಲಾ ಗೃಹ ರಕ್ಷಕ ದಳ ಕಚೇರಿಯಲ್ಲಿ ಬುಧವಾರ ಗೃಹರಕ್ಷಕ ದಳದ ವತಿಯಿಂದ ನಡೆದ, ಜಿಲ್ಲಾ ಮಟ್ಟದ ವೃತ್ತಿಪರ ಮತ್ತು ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಗೃಹರಕ್ಷಕರು ದೇಶ ಸೇವೆ, ಸಮಾಜ ಸೇವೆಯಲ್ಲಿ ತಲ್ಲೀನರಾದಂತೆ, ಕ್ರೀಡಾ ಕ್ಷೇತ್ರದಲ್ಲೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಮುಂದೆ ಜಿಲ್ಲೆ, ರಾಜ್ಯ, ದೇಶವನ್ನು ಪ್ರತಿನಿಧಿಸುವಂತಾಗಬೇಕು ಎಂದರು.
ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಕೆ.ಪ್ರಶಾಂತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಏಳಿಗೆಗಾಗಿ ಯಾವುದೇ ಪ್ರತಿಫಲ ಬಯಸದೆ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಗೃಹ ಕ್ಷಕ ದಳವನ್ನು ಅಭಿನಂದಿಸಿದರು. ನೆರೆ-ಹೊರೆ, ಪ್ರವಾಹ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ದಿನದ 24 ಗಂಟೆಯೂ ಕಾರ್ಯಪ್ರವೃತ್ತರಾಗುವ ಗೃಹರಕ್ಷಕ ದಳದವರ ಕೆಲಸ ಶಿಸ್ತುಬದ್ದತೆಯನ್ನು ಎತ್ತಿ ತೋರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಅಂತಾರಾಷ್ಟ್ರೀಯ ಕ್ರೀಡಾಪಟು ಶಾಲಿನಿ ಶೆಟ್ಟಿ, ಗೃಹರಕ್ಷಕ ದಳದ ಅಧೀಕ್ಷಕಿ ಕವಿತಾ, ಕಾರ್ಕಳ ಘಟಕದ ಪ್ಲಟೂನ್ ಕಮಾಂಡರ್ ಪ್ರಭಾಕರ್ ಸುವರ್ಣ ಮತ್ತು ಗೃಹರಕ್ಷಕ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.
ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿ, ಬ್ರಹ್ಮಾವರ ಘಟಕದ ಪ್ಲಟೂನ್ ಕಮಾಂಡರ್ ಸ್ಟೀವನ್ ಪ್ರಕಾಶ್ ನಿರೂಪಿಸಿದರು. ಜಿಲ್ಲಾ ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡೆಂಟ್ ಕೆ. ಸಿ ರಾಜೇಶ್ ವಂದಿಸಿದರು.
ಕ್ರೀಡಾಕೂಟದಲ್ಲಿ ವಿಜೇತರಾದ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಬಹುಮಾನ ವಿತರಿಸಲಾಯಿತು.







