ರೈತರಿಗೆ ಕನಿಷ್ಠ ಬೆಂಬಲ ಬೆಲೆ ಭರವಸೆ ಸಿಕ್ಕರೆ ಮನೆಗೆ ಹೋಗುವಂತೆ ನಾನು ಹೇಳುತ್ತೇನೆ: ಸತ್ಯಪಾಲ್ ಮಲಿಕ್
"ಕೃಷಿ ಕಾನೂನನ್ನು ಹಿಂತೆಗೆದುಕೊಳ್ಳುವ ಮೂಲಕ ಪ್ರಧಾನಿ ಹೃದಯ ವೈಶಾಲ್ಯತೆ ತೋರಿದ್ದಾರೆ"

ಶಿಲ್ಲಾಂಗ್ (ಮೇಘಾಲಯ): ರೈತ ಹೋರಾಟದ ವಿಷಯದಲ್ಲಿ ಕೇಂದ್ರ ಸರಕಾರದ ವಿರುದ್ಧ ಭಿನ್ನಾಭಿಪ್ರಾಯ ಹೊಂದಿದ್ದ, ನರೇಂದ್ರ ಮೋದಿ ಸರಕಾರವನ್ನು ಗುರಿಯಾಗಿಸಿಕೊಂಡು ಟೀಕಾಸ್ತ್ರ ಪ್ರಯೋಗಿಸುತ್ತಿದ್ದ ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕೃಷಿ ಕಾನೂನು ರದ್ದತಿಯನ್ನು ಸ್ವಾಗತಿಸಿದ್ದು, ಈ ನಿರ್ಧಾರದಿಂದ ಪ್ರಧಾನಿಯವರು ಹೃದಯ ವೈಶಾಲ್ಯತೆ ತೋರಿದ್ದಾರೆ ಎಂದು ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಸ್ಯೆಯನ್ನು ಮೀರಿ ರೈತರು ಹೋರಾಟ ಹಾಗೂ ಪ್ರತಿಭಟನೆಯನ್ನು ವಿಸ್ತರಿಸಬಾರದು ಎಂದು ನಾನು ರೈತರಿಗೆ ವಿವರಿಸುವುದಾಗಿ ಮಲಿಕ್ ಹೇಳಿದರು.
ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಲಿಕ್, "ಸರಕಾರವು ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಭರವಸೆ ನೀಡಬೇಕು ಹಾಗೂ ಸಮಿತಿಯನ್ನು ರಚಿಸಬೇಕು. ಈ ವಿಷಯವನ್ನು ಪರಿಹರಿಸಲಾಗುವುದು ಹಾಗೂ ಅದರ ನಂತರ ರೈತರನ್ನು ಮನೆಗೆ ಹಿಂದಿರುಗುವಂತೆ ನಾನು ಒತ್ತಾಯಿಸುತ್ತೇನೆ" ಎಂದು ಹೇಳಿದರು.
ಸಾಂವಿಧಾನಿಕ ಹುದ್ದೆಯಲ್ಲಿದ್ದರೂ ಸರಕಾರವನ್ನು ಏಕೆ ತರಾಟೆಗೆ ತೆಗೆದುಕೊಂಡಿದ್ದೀರಿ ಎಂಬ ಪ್ರಶ್ನೆಗೆ, "ಹಿಂದೆಯೂ ರಾಜ್ಯಪಾಲರು ಇಂತಹ ನಿಲುವುಗಳನ್ನು ತೆಗೆದುಕೊಂಡಿದ್ದರು. ರಾಜ್ಯಪಾಲರು ಚುನಾಯಿತ ಸರಕಾರಗಳನ್ನು ಉರುಳಿಸಿದ್ದರು. ಆಗ ಮೌನ ಏಕೆ?" ಎಂದು ಕೇಳಿದರು.
ಸರಕಾರ ಈ ನಿರ್ಧಾರವನ್ನು ಮೊದಲೇ ತೆಗೆದುಕೊಂಡಿದ್ದರೆ ಹೆಚ್ಚು ಪ್ರಯೋಜನಕಾರಿಯಾಗುತ್ತಿತ್ತು ಎಂದು ಹೇಳಿದ ಮಲಿಕ್, ಯಾವುದೇ ರಾಜಕೀಯ ಒತ್ತಡ ಅಥವಾ ರೈತರ ಮೇಲೆ ಪ್ರಭಾವ ಬೀರುವ ವಿರೋಧ ಪಕ್ಷಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ರೈತರು ರಾಜಕೀಯ ರಹಿತರು ಹಾಗೂ ಯಾವುದೇ ರಾಜಕೀಯ ಪಕ್ಷದಿಂದ ಪ್ರಭಾವಿತರಾಗಿಲ್ಲ. ರೈತರ ಕಡೆಯಿಂದ ಕಲ್ಲು ತೂರಾಟ ಅಥವಾ ನಿಂದನೆಗಳು ನಡೆದಿರುವ ಯಾವುದೇ ಘಟನೆ ನಡೆದಿಲ್ಲ, ವಿರೋಧ ಪಕ್ಷದ ನಾಯಕರು ಅವರನ್ನು ಬೆಂಬಲಿಸಲು ಬಂದಿರಬಹುದು, ಆದರೆ ರೈತರು ಚಳವಳಿಯಲ್ಲಿ ಅವರಿಗೆ ಜಾಗ ನೀಡಲಿಲ್ಲ" ಎಂದು ಮಲಿಕ್ ಹೇಳಿದರು.







