ಪೊಲೀಸರಿಂದ ದಿಲ್ಲಿ ಗಲಭೆ ಪ್ರಕರಣದ ಆರೋಪಿಗಳ ರಕ್ಷಣೆ ಆರೋಪ: ತನಿಖೆಗೆ ದಿಲ್ಲಿ ನ್ಯಾಯಾಲಯ ಆದೇಶ

ಹೊಸದಿಲ್ಲಿ,ನ.24: 2020ರ ಫೆಬ್ರವರಿಯಲ್ಲಿ ನಡೆದ ದಿಲ್ಲಿ ಗಲಭೆ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಧಾರಗಳ ಕೊರತೆಯಿಂದ ದೋಷಮುಕ್ತಗೊಂಡ ಐದು ಮಂದಿಯನ್ನು ಪ್ರಕರಣದಲ್ಲಿ ಸಿಕ್ಕಿಬೀಳದಂತೆ ರಕ್ಷಣೆ ನೀಡಲು ಉದ್ದೇಶಪೂರ್ವಕವಾದ ಪ್ರಯತ್ನಗಳು ನಡೆದಿತ್ತೇ ಎಂಬ ಬಗ್ಗೆ ತನಿಖೆ ನಡೆಸಲು ದಿಲ್ಲಿ ನ್ಯಾಯಾಲಯವು ಪೊಲೀಸರಿಗೆ ಮಂಗಳವಾರ ಆದೇಶಿಸಿದೆ.
2020ರ ಫೆಬ್ರವರಿ 25ರಂದು ಈಶಾನ್ಯ ದಿಲ್ಲಿಯಲ್ಲಿ ಗಲಭೆ ನಡೆದ ಸಂದರ್ಭ ಈ ಐವರು ಆರೋಪಿಗಳನ್ನು ಒಳಗೊಂಡ ಗುಂಪೊಂದು ತನ್ನ ಮೆಡಿಕಲ್‌ಶಾಪ್ ಹಾಗೂ ಮನೆಯ ಮೇಲೆ ದಾಳಿ ನಡೆಸಿತ್ತು ಹಾಗೂ 22-23 ಲಕ್ಷ ಮೌಲ್ಯದ ಔಷಧಿಗಳು ಹಾಗೂ ಪ್ರಸಾದನ ಸಾಮಾಗ್ರಿಗಳನ್ನು ದೋಚಿಕೊಂಡು ಹೋಗಿತ್ತು ಎಂದು ಫಿರೋಜ್‌ಖಾನ್ ಎಂಬವರು ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಆರೋಪಿಗಳ ವಿರುದ್ಧ ಸೂಕ್ತ ಪುರಾವೆಗಳನ್ನು ಹಾಜರುಪಡಿಸಲು ಸಾಧ್ಯವಾಗದ ಕಾರಣ ಅವರ ವಿರುದ್ಧದ ಮೊಕದ್ದಮೆಯನ್ನು ಕೈಬಿಡಲಾಗಿದೆಯೇ ಹೊರತು ಪ್ರಕರಣ ನಡೆದಿಲ್ಲವೆಂಬುದಾಗಲಿ ಅಥವಾ ಅವರ ವಿರುದ್ಧ ಸುಳ್ಳು ದೋಷಾರೋಪ ಹೊರಿಸಲಾಗಿದೆ ಎಂದಾಗಲಿ ಅಲ್ಲವೆಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.
ಈ ಪ್ರಕರಣದಲ್ಲಿ ಫಿರೋಝ್ ಖಾನ್ ಒಬ್ಬರೇ ಏಕೈಕ ಸಾಕ್ಷಿದಾರರಾಗಿದ್ದಾರೆ. ಅವರು ಕೂಡಾ ಪೊಲೀಸ್ ಠಾಣೆಯಲ್ಲಿ ತೋರಿಸಲಾದ ಛಾಯಾಚಿತ್ರಗಳ ಮೂಲಕ ಆರೋಪಿಗಳನ್ನು ಗುರುತಿಸಿದ್ದಾರೆಂದು ನ್ಯಾಯಾಧೀಶರು ತಿಳಿಸಿದರು. ಆದರೆ ಪ್ರಕರಣದ ಇತರ ಸಾಕ್ಷಿದಾರರನ್ನು ಹುಡುಕಲು ತನಿಖಾಧಿಕಾರಿಗಳು ಯಾವುದೇ ಪ್ರಯತ್ನಗಳನ್ನು ನಡೆಸಿದ್ದಾರೆಯೇ ಎಂಬ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಯಾವುದೇ ಸೂಚನೆ ಕಂಡುಬಂದಿಲ್ಲವೆಂದು ಅವರು ಹೇಳಿದ್ದಾರೆ.