ದೇಶ ವಿಭಜನೆಯಾದಾಗ ದೂರವಾದ ಸ್ನೇಹಿತರ ಪುನರ್ಮಿಲನಕ್ಕೆ ವೇದಿಕೆಯಾದ ಕರ್ತಾರ್ಪುರ

photo:twitter/@SinghLions
ಇಸ್ಲಮಾಬಾದ್, ನ.24: ದೇಶ ವಿಭಜನೆಯಾದಾಗ ದೂರವಾಗಿದ್ದ ಆತ್ಮೀಯ ಸ್ನೇಹಿತರಿಬ್ಬರನ್ನು 74 ವರ್ಷಗಳ ಬಳಿಕ ಮತ್ತೆ ಒಂದುಗೂಡಿಸಿದ ಹೃದಯಸ್ಪರ್ಶಿ ವಿದ್ಯಮಾನಕ್ಕೆ ಕರ್ತಾರ್ಪುರ ಕಾರಿಡಾರ್ ಸಾಕ್ಷಿಯಾಗಿದೆ.
ಸರ್ದಾರ್ ಗೋಪಾಲ್ ಸಿಂಗ್ ಹಾಗೂ ಮುಹಮ್ಮದ್ ಬಶೀರ್ ಬಾಲ್ಯಕಾಲದ ಸ್ನೇಹಿತರು. ಆದರೆ ದೇಶ ವಿಭಜನೆಯಾದಾಗ ಬಶೀರ್ (ಈಗ 91 ವರ್ಷ) ಪಾಕಿಸ್ತಾನಕ್ಕೆ ತೆರಳಿದರು. ಸರ್ದಾರ್ ಗೋಪಾಲ್ ಸಿಂಗ್(ಈಗ 94 ವರ್ಷ) ಭಾರತದಲ್ಲೇ ಉಳಿದರು. ದೇಶ ವಿಭಜನೆಗೂ ಮುನ್ನ ಇವರಿಬ್ಬರೂ ಜತೆಯಾಗಿಯೇ ಕರ್ತಾರ್ಪುರದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಜತೆಯಾಗಿಯೇ ಊಟ ಮಾಡುತ್ತಿದ್ದರು.
ಭಾರತ ವಿಭಜನೆಯಾದಾಗ ಕರ್ತಾರ್ಪುರ ಗುರುದ್ವಾರ ಪಾಕಿಸ್ತಾನದ ಭಾಗವಾಯಿತು. ಇಲ್ಲಿಗೆ ಭಾರತದ ಯಾತ್ರಿಗಳಿಗೆ ಭೇಟಿ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಆರಂಭಿಸಲಾಗಿದ್ದ ಕರ್ತಾರ್ಪುರ ಕಾರಿಡಾರ್ ಈ ಇಬ್ಬರು ಬಾಲ್ಯಸ್ನೇಹಿತರ ಮರುಭೇಟಿಗೆ ವೇದಿಕೆ ಕಲ್ಪಿಸಿದೆ. ಕರ್ತಾರ್ಪುರಕ್ಕೆ ಗೋಪಾಲ್ ಸಿಂಗ್ ಭೇಟಿ ನೀಡಿದ ಸಮಯದಲ್ಲೇ ಅಲ್ಲಿಗೆ ಬಶೀರ್ ಕೂಡಾ ಆಗಮಿಸಿದ್ದು 74 ವರ್ಷಗಳ ಬಳಿಕ ಪರಸ್ಪರ ಭೇಟಿಯಾದ ಆಪ್ತಮಿತ್ರರು ಆನಂದ ಬಾಷ್ಪ ಸುರಿಸುತ್ತಾ ತಮ್ಮ ಬಾಲ್ಯಕಾಲದ ಸವಿನೆನಪುಗಳನ್ನು ಮೆಲುಕು ಹಾಕಿದರು ಎಂದು ಪಾಕಿಸ್ತಾನದ ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಇವರಿಬ್ಬರ ಮರುಭೇಟಿಯ ಹೃದಯಸ್ಪರ್ಶಿ ಸನ್ನಿವೇಶವನ್ನು ಸಿಖ್ ಮುಖಂಡ ಹರ್ಜಿಂದರ್ ಸಿಂಗ್ ಕುಕ್ರೇಜಾ ಟ್ವಿಟರ್ನಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ. ‘ಧರ್ಮ ಮತ್ತು ತೀರ್ಥಯಾತ್ರೆಯನ್ನು ಒಂದು ಕ್ಷಣ ಬದಿಗಿರಿಸಿ. ಇದು ಕರ್ತಾರ್ಪುರದಿಂದ ಹೃದಯಸ್ಪರ್ಶಿ ಕತೆಯಾಗಿದೆ. 1947ರಲ್ಲಿ ಪ್ರತ್ಯೇಕವಾದ ಬಾಲ್ಯಕಾಲದ ಆತ್ಮೀಯ ಸ್ನೇಹಿತರನ್ನು ಕರ್ತಾರ್ಪುರ ಮತ್ತೆ ಒಂದುಗೂಡಿಸಿದೆ’ ಎಂದವರು ಬರೆದಿದ್ದಾರೆ.







