ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ವಕೀಲ ರಾಜೇಶ್ ಭಟ್ ಬಂಧನಕ್ಕೆ ಮನವಿ

ಮಂಗಳೂರು, ನ.24: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನ್ಯಾಯವಾದಿಯನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ಎನ್‌ಎಸ್‌ಯುಐ ರಾಜ್ಯಾದ್ಯಕ್ಷ ಕೀರ್ತಿ ಗಣೇಶ್ ನೇತೃತ್ವದ ನಿಯೋಗ ಪೊಲೀಸ್ ಆಯುಕ್ತರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್.ರಾಜೇಶ್ ಭಟ್ ತಲೆಮರೆಸಿಕೊಂಡಿದ್ದು, ಆರೋಪಿಯ ವಿರುದ್ಧ ಕಿಮಿನಲ್ ಮೊಕದ್ದಮೆಯೂ ನ್ಯಾಯಾಲಯದಲ್ಲಿ ದಾಖಲಾಗಿದೆ. ಆರೋಪಿಯನ್ನು ಬಂಧಿಸುವಂತೆ ನ್ಯಾಯಾಲದಿಂದ ವಾರೆಂಟ್ ಕೂಡ ಜಾರಿಯಾಗಿದೆ. ಆದರೆ ಆರೋಪಿಯನ್ನು ಈವರೆಗೆ ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲಗೊಂಡಿದೆ. ಹಾಗಾಗಿ ಆರೋಪಿಯ ಬಂಧನಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ದ.ಕ.ಎನ್‌ಎಸ್‌ಯುಐ ಅಧ್ಯಕ್ಷ ಸವಾದ್ ಸುಳ್ಯ, ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಯಾಬೆ, ನಮೃತಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ್ ರಾಮ್ ಗೌಡ, ಶ್ವಾನ್ ಸಿರಿ ನಿಯೋಗದಲ್ಲಿದ್ದರು.





