ಪಾರ್ಕ್ ಒತ್ತುವರಿ ತೆರವುಗೊಳಿಸದ ಬಿಡಿಎ ವಿರುದ್ಧ ಹೈಕೋರ್ಟ್ ಅಸಮಾಧಾನ

ಬೆಂಗಳೂರು, ನ.24: ಬಿಡಿಎ ಅನುಮೋದಿತ ಏರ್‍ಕ್ರಾಫ್ಟ್ ಹೌಸಿಂಗ್ ಸೊಸೈಟಿ ಲೇಔಟ್‍ನಲ್ಲಿ ಸಾರ್ವಜನಿಕ ಉದ್ಯಾನವನಗಳ ಒತ್ತುವರಿ ಕುರಿತು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಿಂಗಸಂದ್ರದ ಎಸ್.ಕೆ.ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಬಿಡಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಲೇಔಟ್‍ನ 39 ಪಾರ್ಕ್‍ಗಳ ಪೈಕಿ ಬಹುತೇಕ ಪಾರ್ಕ್ ಒತ್ತುವರಿಯಾಗಿದೆ ಎಂದು ಬಿಡಿಎ ಸ್ವತಃ ವರದಿ ಸಲ್ಲಿಸಿದೆ. ಈವರೆಗೆ ಒತ್ತುವರಿ ತೆರವುಗೊಳಿಸದಿರಲು ಕಾರಣವೇನೆಂದು ನ್ಯಾಯಪೀಠವು ಬಿಡಿಎಯನ್ನು ಪ್ರಶ್ನಿಸಿದೆ. ಪಾರ್ಕ್‍ನಲ್ಲಿ ಕಟ್ಟಡ ಕಟ್ಟಲು ಅನುಮತಿ ಯಾರು ಕೊಟ್ಟರು? ಹೀಗೆ ಪಾರ್ಕ್ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ಕಟ್ಟಡಗಳಿಗೆ ಹೊಣೆ ಯಾರು? ಕಟ್ಟಡ ನಿರ್ಮಿಸುವಾಗ ಬಿಡಿಎ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದೆ.
ಒತ್ತುವರಿ ತೆರವುಗೊಳಿಸದ ಬಿಡಿಎ ಆಯುಕ್ತರನ್ನು ಅಮಾನತುಪಡಿಸುವುದಾಗಿ ನ್ಯಾಯಪೀಠವು ಎಚ್ಚರಿಕೆ ನೀಡಿತು. ಈ ಮಧ್ಯೆ ಬಿಡಿಎ ವಕೀಲರು ಒತ್ತುವರಿ ತೆರವಿಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಪೆÇಲೀಸ್ ಭದ್ರತೆ ಪಡೆದು ಒತ್ತುವರಿ ತೆರವುಗೊಳಿಸಲಾಗುವುದು. ಹೈಕೋರ್ಟ್ ಆದೇಶ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ನ್ಯಾಯಪೀಠಕ್ಕೆ ಬಿಡಿಎ ವಕೀಲರು ಮನವಿ ಮಾಡಿದರು. ಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಸೂಚಿಸಿದ ಪೀಠ ವಿಚಾರಣೆಯನ್ನು ಫೆಬ್ರವರಿ ಮೊದಲ ವಾರಕ್ಕೆ ಮುಂದೂಡಿದೆ.
ಈ ಹಿಂದೆ ಪಿಐಎಲ್ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಲೇಔಟ್‍ನಲ್ಲಿರುವ ಪಾರ್ಕ್‍ಗಳ ಸರ್ವೇ ನಡೆಸುವಂತೆ ಸೂಚಿಸಿತ್ತು. ಸಿಂಗಸಂದ್ರ, ಕೂಡ್ಲು ಗ್ರಾಮಗಳಲ್ಲಿ ನಿರ್ಮಾಣವಾದ ಲೇಔಟ್‍ನ ಸರ್ವೇ ನಡೆಸಿದ ಬಿಡಿಎ 39 ಪಾರ್ಕ್‍ಗಳ ಪೈಕಿ ಬಹುತೇಕ ಪಾರ್ಕ್ ಒತ್ತುವರಿಯಾಗಿದೆ ಎಂದು ವರದಿ ನೀಡಿತ್ತು. 60 ದಿನಗಳಲ್ಲಿ ಕಾನೂನು ಪ್ರಕಾರ ಒತ್ತುವರಿ ತೆರವುಗೊಳಿಸುವಂತೆ ಹೈಕೋರ್ಟ್ ಬಿಡಿಎಗೆ ನಿರ್ದೇಶನ ನೀಡಿತ್ತು. ಪಾರ್ಕ್ ಜಾಗವನ್ನು ಸೊಸೈಟಿ ಬಿಡುಗಡೆ ಪತ್ರದ ಮೂಲಕ ಬಿಡಿಎಗೆ ಒಪ್ಪಿಸಿದ್ದರೂ ಒತ್ತುವರಿ ಹೇಗಾಯಿತೆಂದು ಹೈಕೋರ್ಟ್ ಪ್ರಶ್ನಿಸಿದೆ.
ಒತ್ತುವರಿ ತೆರವುಗೊಳಿಸುವುದಾಗಿ ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ತಿಳಿಸಿದ್ದ ಬಿಡಿಎ ಈವರೆಗೂ ಕ್ರಮ ಕೈಗೊಂಡಿಲ್ಲ. ಹೀಗಾಗಿಯೇ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಬಿಡಿಎಯನ್ನು ತರಾಟೆಗೆ ತೆಗೆದುಕೊಂಡಿದ್ದು, ಶೀಘ್ರ ಒತ್ತುವರಿ ತೆರವುಗೊಳಿಸುವಂತೆ ತಾಕೀತು ಮಾಡಿದೆ.







