ಎಂಜಿಎನ್‌ಆರ್‌ಇಜಿಎ ಮುಂದುವರಿಸಲು ಹಣಕಾಸು ಬಿಡುಗಡೆ ಮಾಡಿ: ಪ್ರಧಾನಿ ಮೋದಿಗೆ 80 ಗಣ್ಯ ನಾಗರಿಕರಿಂದ ಬಹಿರಂಗ ಪತ್ರ
ಹೊಸದಿಲ್ಲಿ, ನ. 24: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಗೆ ಸಾಕಷ್ಟು ಹಣಕಾಸು ಕೂಡಲೇ ಬಿಡುಗಡೆ ಮಾಡುವಂತೆ ಕೋರಿ ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು, ಪ್ರಾದ್ಯಾಪಕರು ಸೇರಿದಂತೆ 80 ಗಣ್ಯರನ್ನು ಒಳಗೊಂಡ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದೆ. ಹಣಕಾಸನ್ನು ಕೂಡಲೇ ಬಿಡುಗಡೆ ಮಾಡಿದರೆ ಮಾತ್ರ ಆಡಳಿತ ಈ ಯೋಜನೆಯನ್ನು ಮುಂದುವರಿಸಬಹುದು ಹಾಗೂ ವಿಸ್ತರಿಸಬಹುದು ಎಂದು ಅದು ಹೇಳಿದೆ. ಮುಖ್ಯವಾಗಿ ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭ ಹಲವು ಗ್ರಾಮೀಣ ಕುಟುಂಬಗಳಿಗೆ ಎಂಜಿಎನ್‌ಆರ್‌ಇಜಿಎ ನಿರ್ಣಾಯಕ ಜೀವನಾಧಾರ ಎಂದು ಸಾಬೀತಾಗಿರುವುದಾಗಿ ಗುಂಪು ಪತ್ರದಲ್ಲಿ ಗಮನ ಸೆಳೆದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2020ರಲ್ಲಿ, ಕೊರೋನ ರೋಗದ ಮೊದಲ ವರ್ಷದಲ್ಲಿ ಶೇ. 41ಕ್ಕೂ ಹೆಚ್ಚು ಗ್ರಾಮೀಣ ಮನೆಗಳು ಕೆಲಸ ಕೋರಿವೆ. ಈ ನಿರ್ಣಾಯಕ ಭದ್ರತೆಯ ಪುರಾವೆಯ ಹೊರತಾಗಿಯೂ ಹಣಕಾಸು ಮಂಜೂರನ್ನು ಶೇ. 30ರಷ್ಟು ಕಡಿತಗೊಳಿಸಲಾಗಿದೆ ಎಂದು ಪತ್ರದಲ್ಲಿ ಹೇಳಿದೆ. ‘‘ಹಣಕಾಸಿನ ಕೊರತೆ ಕೆಲಸದ ಬೇಡಿಕೆಯನ್ನು ಕುಂಠಿತಗೊಳಿಸಿದೆ. ಕಾರ್ಮಿಕರಿಗೆ ವೇತನ ನೀಡುವಲ್ಲಿ ವಿಳಂಬವಾಗಿದೆ. ಇದು ಕಾಯ್ದೆಯ ಉಲ್ಲಂಘನೆ. ಅವರು ಆರ್ಥಿಕ ಚೇತರಿಕೆಯನ್ನು ಕೂಡ ನಿರ್ಬಂಧಿಸುತ್ತಿದ್ದಾರೆ’’ ಎಂದು ಪತ್ರದಲ್ಲಿ ತಿಳಿಸಿದೆ. ಪತ್ರಕ್ಕೆ ಸಹಿ ಹಾಕಿದವರಲ್ಲಿ ಜಯತಿ ಘೋಷ್, ಜೀನ್ ಡ್ರೆಜ್, ಭಾರತದ ಯೋಜನಾ ಆಯೋಗದ ಮಾಜಿ ಸದಸ್ಯ ಅಭಿಜಿತ್ ಸೇನ್, ನಿವೃತ್ತ ನಾಗರಿಕ ಸೇವಾ ಅಧಿಕಾರಿ ಪ್ರಣವ್ ಸೇನ್, ಜವಾಹಾರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರಭಾತ್ ಪಟ್ನಾಯಕ್, ಮುಂಬೈ ಸ್ಕೂಲ್ ಆಫ್ ಇಕಾನಮಿಕ್ಸ್ ಆ್ಯಂಡ್ ಪಬ್ಲಿಕ್ ಪಾಲಿಸಿಯ ನಿರ್ದೇಶಕ ರಿತು ದೇವನ್ ಅವರು ಸೇರಿದ್ದಾರೆ.