ದ್ರಾವಿಡ್, ಸಚಿನ್ ಹೆಸರಿಂದ ಪ್ರೇರಿತ ನ್ಯೂಝಿಲ್ಯಾಂಡ್ ಆಲ್ ರೌಂಡರ್ ರಾಚಿನ್ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ

ರಾಚಿನ್ (Photo: Twitter/@BLACKCAPS)
ಕಾನ್ಪುರ: ನ್ಯೂಝಿಲ್ಯಾಂಡ್ ನ ಎಡಗೈ ಸ್ಪಿನ್ನರ್ ರಾಚಿನ್ ರವೀಂದ್ರ, ಅವರ ಮೊದಲ ಹೆಸರು ಭಾರತದ ಇಬ್ಬರು ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರಿಂದ ಸ್ಫೂರ್ತಿ ಪಡೆದಿದೆ. ಗುರುವಾರ ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ ನಲ್ಲಿ ರಾಚಿನ್ ಪಾದಾರ್ಪಣೆ ಮಾಡಿದ್ದಾರೆ.
ರಾಚಿನ್ ಅವರ ಮೊದಲಕ್ಷರ 'ರಾ' ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಂದ ಸ್ಫೂರ್ತಿ ಪಡೆದಿದ್ದರೆ, 'ಚಿನ್' ಸಚಿನ್ ತೆಂಡೂಲ್ಕರ್ ಅವರಿಂದ ಸ್ಪೂರ್ತಿ ಪಡೆದಿದೆ.
ಈ ವರ್ಷದ ಆರಂಭದಲ್ಲಿ ಸೌತಾಂಪ್ಟನ್ನಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅನ್ನು ಗೆಲ್ಲಲು ಭಾರತವನ್ನು ಸೋಲಿಸಿದ ನ್ಯೂಝಿಲ್ಯಾಂಡ್ ತಂಡದಲ್ಲಿ ರಾಚಿನ್ ರವೀಂದ್ರ ಕೂಡ ಇದ್ದರು.
22 ವರ್ಷದ ರಾಚಿನ್ ದೀಪಕ್ ಪಟೇಲ್, ಇಶ್ ಸೋಧಿ, ಜೀತನ್ ಪಟೇಲ್, ಜೀತ್ ರಾವಲ್, ಅಜಾಝ್ ಪಟೇಲ್, ರೋನಿ ಹೀರಾ ಹಾಗೂ ತರುಣ್ ನೆತುಲಾ ಬಳಿಕ ಕಿವೀಸ್ ತಂಡವನ್ನು ಸೇರಿರುವ ಭಾರತೀಯ ಮೂಲದ ಕ್ರಿಕೆಟಿಗರಾಗಿದ್ದಾರೆ.
ರವೀಂದ್ರ ಅವರು 2016 ಅಂಡರ್-19 ವಿಶ್ವಕಪ್ ಗಾಗಿ ನ್ಯೂಝಿಲ್ಯಾಂಡ್ ತಂಡದ ಭಾಗವಾಗಿದ್ದರು. ಭಾರತದ ಯುವ ಆಟಗಾರ ರಿಷಬ್ ಪಂತ್, ವಾಷಿಂಗ್ಟನ್ ಸುಂದರ್ ಮತ್ತು ಇಶಾನ್ ಕಿಶನ್ ಅವರ ವಿರುದ್ಧ ಆಡಿದ್ದರು.
1990 ರ ದಶಕದಲ್ಲಿ ನ್ಯೂಝಿಲ್ಯಾಡಿಗೆ ತೆರಳಿದ ಬೆಂಗಳೂರಿನ ಸಾಫ್ಟ್ವೇರ್ ಸಿಸ್ಟಮ್ ಆರ್ಕಿಟೆಕ್ಟ್ ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ ನ್ಯೂಝಿಲ್ಯಾಂಡ್ ಹಟ್ ಹಾಕ್ಸ್ ಕ್ಲಬ್ನ ಸಂಸ್ಥಾಪಕರಾಗಿದ್ದಾರೆ. ಇದು ಪ್ರತಿ ಬೇಸಿಗೆಯಲ್ಲಿ ಆಟಗಾರರನ್ನು ಭಾರತಕ್ಕೆ ಕರೆತರುತ್ತದೆ.