ಯುಎಇ ರಾಜಕುಮಾರಿಯ ಅಪಹರಣಕ್ಕಾಗಿ ಮೋದಿ ವಿರುದ್ಧ ನಿರ್ಬಂಧಕ್ಕಾಗಿ ಬ್ರಿಟನ್ ಪ್ರಧಾನಿಗೆ ಕ್ರಿಶ್ಚಿಯನ್ ಮಿಷೆಲ್ ಆಗ್ರಹ

ಕ್ರಿಶ್ಚಿಯನ್ ಮಿಷೆಲ್ (File Photo:PTI)
ಹೊಸದಿಲ್ಲಿ: ದಿಲ್ಲಿಯ ತಿಹಾರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಮೂರನೇ ವರ್ಷವನ್ನು ಕಳೆಯುತ್ತಿರುವ 3,600 ಕೋ.ರೂ.ಗಳ ಆಗಸ್ಟಾ ಆಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ವ್ಯವಹಾರದಲ್ಲಿ ಆರೋಪಿಯಾಗಿರುವ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮಿಷೆಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನು ಹೊರಿಸದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರವನ್ನು ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು thewire.in ವರದಿ ಮಾಡಿದೆ.
ಅ.5ರಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ತಿಹಾರ್ ಜೈಲಿನಿಂದ ಬರೆದಿರುವ, ಆದರೆ ಇದೀಗಷ್ಟೇ ಬಹಿರಂಗಗೊಳಿಸಲಾಗಿರುವ ಒಂಬತ್ತು ಪುಟಗಳ ಕೈಬರಹದ ಪತ್ರದಲ್ಲಿ ಮಿಷೆಲ್, 2018ರಲ್ಲಿ ಯುಎಇ ರಾಜಕುಮಾರಿ ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ ವಿಹಾರ ನೌಕೆಯ ಮೇಲೆ ಭಾರತೀಯ ವಿಶೇಷ ಪಡೆಗಳ ದಾಳಿಯ ಬಳಿಕ ಆಕೆಯ ಅಪಹರಣಕ್ಕೆ ಮೋದಿ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ದುಬೈ ಆಡಳಿತಗಾರರ ಪರಿತ್ಯಕ್ತ ಮತ್ತು ಪರಾರಿಯಾಗಿದ್ದ ಪುತ್ರಿ ಲತೀಫಾರಿಗೆ ವಿನಿಮಯವಾಗಿ ಯುಎಇ ಅಧಿಕಾರಿಗಳು ತನ್ನನ್ನು ಭಾರತಕ್ಕೆ ಹಸ್ತಾಂತರಿಸಿದ್ದರು ಎಂದೂ ಮಿಷೆಲ್ ಹೇಳಿದ್ದಾರೆ.
ತನ್ನ ವಿರುದ್ಧ ಯಾವುದೇ ಆರೋಪ ಅಥವಾ ವಿಚಾರಣೆ ಇಲ್ಲದೆ ಮೂರು ವರ್ಷಗಳಿಂದ ತಾನು ಭಾರತದ ಜೈಲಿನಲ್ಲಿದ್ದೇನೆ ಮತ್ತು ಈಗ ಒಪ್ಪಿಕೊಳ್ಳಲಾಗಿರುವ ಹಸ್ತಾಂತರ ನಿರೂಪಣೆಯಡಿ ತನ್ನನ್ನು ದುಬೈನಿಂದ ಭಾರತಕ್ಕೆ ತರಲಾಗಿತ್ತು ಮತ್ತು ಇದನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯೂ ದೃಢಪಡಿಸಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಭಾರತದಲ್ಲಿ ಮಿಷೆಲ್ ರನ್ನು ಬಂಧನದಲ್ಲಿಟ್ಟಿರುವುದು ನಿರಂಕುಶವಾಗಿದೆ ಎಂದು ಈ ವರ್ಷದ ಫೆಬ್ರವರಿಯಲ್ಲಿ ಎತ್ತಿ ಹಿಡಿದಿದ್ದ ವಿಶ್ವಸಂಸ್ಥೆ ಅಧೀನದ ನಿರಂಕುಶ ಬಂಧನಗಳ ಕುರಿತ ಕಾರ್ಯ ಸಮಿತಿ (ಡಬ್ಲುಜಿಎಡಿ)ಯು, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರೆ ನೀಡಿತ್ತು. 2018ರಲ್ಲಿ ರಾಜಕುಮಾರಿ ಲತೀಫಾರಿಗೆ ವಿನಿಮಯವಾಗಿ ತನ್ನ ಕಕ್ಷಿದಾರನನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು ಎಂಬ ಮಿಷೆಲ್ ಪರ ವಕೀಲರ ಹೇಳಿಕೆಯನ್ನೂ ಡಬ್ಲ್ಯುಜಿಎಡಿ ಗಮನಕ್ಕೆ ತೆಗೆದುಕೊಂಡಿತ್ತು. ಆದರೆ ಈ ಆರೋಪಗಳನ್ನು ತಿರಸ್ಕರಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಡಬ್ಲ್ಯುಜಿಎಡಿಯ ಅಭಿಪ್ರಾಯವು ಸೀಮಿತ ಮಾಹಿತಿ ಮತ್ತು ಪಕ್ಷಪಾತದ ಆರೋಪಗಳನ್ನು ಆಧರಿಸಿದೆ ಎಂದು ಬಣ್ಣಿಸಿತ್ತು.
ಭ್ರಷ್ಟಾಚಾರದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದ್ದ ಸುಳ್ಳು ತಪ್ಪೊಪ್ಪಿಗೆಗೆ ಸಹಿ ಮಾಡುವಂತೆ ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ತನ್ನನ್ನು ದುಬೈನಲ್ಲಿ ಭೇಟಿಯಾಗಿದ್ದಾಗ ತನಗೆ ಸೂಚಿಸಿದ್ದರು ಎಂದು ದಿಲ್ಲಿಯ ಬ್ರಿಟಿಷ್ ರಾಯಭಾರಿ ಕಚೇರಿಗೆ ಸಲ್ಲಿಸಿರುವ ಪತ್ರದಲ್ಲಿ ಮಿಷೆಲ್ ಹೇಳಿರುವುದು ಮಹತ್ವವನ್ನು ಪಡೆದುಕೊಂಡಿದೆ. ಅಸ್ತಾನಾರನ್ನು 2021 ಜುಲೈನಲ್ಲಿ ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ನೇಮಕಗೊಳಿಸಲಾಗಿದೆ.
ಮೇ ಮಧ್ಯಭಾಗದಲ್ಲಿ ದುಬೈನ ಹಯಾತ್ ಹೋಟೆಲ್ ನಲ್ಲಿ ನಡೆದಿದ್ದ, ಐವರು ಯುಎಇ ಅಧಿಕಾರಿಗಳೂ ಉಪಸ್ಥಿತರಿದ್ದ ಅಸ್ತಾನಾ ಜೊತೆಗಿನ ಭೇಟಿ ಸಂದರ್ಭದಲ್ಲಿ, ಸುಳ್ಳು ತಪ್ಪೊಪ್ಪಿಗೆ ಸಹಿ ಹಾಕಲು ನಿರಾಕರಿಸಿದರೆ ತನ್ನನ್ನು ಭಾರತಕ್ಕೆ ಒಯ್ದು ಸುದೀರ್ಘ ಸಮಯ ಜೈಲಿನಲ್ಲಿಡಲಾಗುವುದು ಮತ್ತು ಎಂದಾದರೊಂದು ದಿನ ತಾನು ಜಾಮೀನು ಪಡೆದುಕೊಂಡರೆ ತನಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುವುದಿಲ್ಲ ಮತ್ತು 20 ವರ್ಷಗಳ ಕಾಲ ಭಾರತದ ಜೈಲಿನಲ್ಲಿ ಕೊಳೆಸಲಾಗುವುದು ಎಂದು ತನಗೆ ತಿಳಿಸಲಾಗಿತ್ತು ಎಂದೂ ಮಿಷೆಲ್ ಬರೆದಿದ್ದಾರೆ ಎಂದು ವರದಿಯಾಗಿದೆ.
ಲತೀಫಾರನ್ನು ಅಪಹರಿಸಿ ಭಾರತಕ್ಕೆ ಒಯ್ಯಲಾಗಿತ್ತು ಮತ್ತು ಬಳಿಕ ವಿಮಾನದಲ್ಲಿ ದುಬೈಗೆ ವಾಪಸ್ ರವಾನಿಸಲಾಗಿತ್ತು ಎಂದಿರುವ ಮಿಷೆಲ್, ಏಳು ದಿನಗಳ ಹಿಂದಷ್ಟೇ ದುಬೈನಿಂದ ಪರಾರಿಯಾಗಿದ್ದ ಲತೀಫಾರನ್ನು ಅಪಹರಿಸುವಂತೆ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಮೋದಿಯವರನ್ನು ಕೋರಿಕೊಂಡಿದ್ದರು ಎಂದು ಲಂಡನ್ ಉಚ್ಚ ನ್ಯಾಯಾಲಯವು ದಾಖಲಿಸಿಕೊಂಡಿದ್ದನ್ನು ಉಲ್ಲೇಖಿಸಿ, ಬದಲಿಗೆ ದುಬೈನಿಂದ ಭಾರತಕ್ಕೆ ತನ್ನ ಹಸ್ತಾಂತರಕ್ಕೆ ಮೋದಿ ಬೇಡಿಕೆಯನ್ನಿಟ್ಟಿದ್ದರು ಎಂದು ಪತ್ರದಲ್ಲಿ ಬರೆದಿದ್ದಾರೆ.







