ಭಾವನೆಗಳಿಗೆ ನೋವಾಗಿದ್ದರೆ ಒಳ್ಳೆಯದೇನನ್ನಾದರೂ ಓದಿ: ಖುರ್ಷಿದ್ ಕೃತಿಯ ನಿಷೇಧ ಕೋರಿದ್ದ ಅರ್ಜಿಗೆ ಹೈಕೋರ್ಟ್ ತಿರಸ್ಕಾರ
"ಪುಸ್ತಕವನ್ನು ಓದುವಂತೆ ಯಾರೂ ಹೇಳಲಿಲ್ಲ"

ಹೊಸದಿಲ್ಲಿ,ನ.25: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ನೂತನ ಪುಸ್ತಕವನ್ನು ನಿಷೇಧಿಸುವಂತೆ ಕೋರಿದ್ದ ಅರ್ಜಿಯನ್ನು ಗುರುವಾರ ತಿರಸ್ಕರಿಸಿದ ದಿಲ್ಲಿ ಉಚ್ಚ ನ್ಯಾಯಾಲಯವು,ಭಾವನೆಗಳಿಗೆ ನೋವುಂಟಾಗಿದ್ದರೆ ಜನರು ಒಳ್ಳೆಯದೇನನ್ನಾದರೂ ಓದಬಹುದು ಎಂದು ಹೇಳಿತು.
ಖುರ್ಷಿದ್ ತನ್ನ ‘ಸನ್‌ರೈಸ್ ಓವರ್ ಅಯೋಧ್ಯಾ: ನೇಷನ್‌ಹುಡ್ ಇನ್ ಅವರ ಟೈಮ್ಸ್’ ಪುಸ್ತಕದಲ್ಲಿ ಹಿಂದುತ್ವದ ‘ಪ್ರಬಲ ಆವೃತ್ತಿ’ಯನ್ನು ಐಸಿಸ್ ಮತ್ತು ಬೋಕೊ ಹರಾಮ್‌ನಂತಹ ಭಯೋತ್ಪಾದಕ ಗುಂಪುಗಳ ಜಿಹಾದಿ ಇಸ್ಲಾಮಿಗೆ ಹೋಲಿಸಿದ್ದು ವಿವಾದವನ್ನು ಸೃಷ್ಟಿಸಿದೆ.
‘ಪುಸ್ತಕವನ್ನು ಓದದಂತೆ ಅಥವಾ ಅದನ್ನು ಖರೀದಿಸದಂತೆ ನೀವೇಕೆ ಜನರನ್ನು ಕೇಳಿಕೊಳ್ಳಬಾರದು? ಪುಸ್ತಕವನ್ನು ಕೆಟ್ಟದಾಗಿ ಬರೆಯಲಾಗಿದೆ ಮತ್ತು ಅದನ್ನು ಓದಬೇಡಿ ಎಂದು ಪ್ರತಿಯೊಬ್ಬರಿಗೂ ಹೇಳಿ.ಭಾವನೆಗಳಿಗೆ ನೋವುಂಟಾಗಬಹುದಾದರೆ ಅವರು ಒಳ್ಳೆಯದೇನನ್ನಾದರೂ ಓದಲಿ. ಜನರು ಅಷ್ಟೊಂದು ಸೂಕ್ಷ್ಮವಾಗಿದ್ದರೆ ನಾವೇನು ಮಾಡಲು ಸಾಧ್ಯವಿದೆ? ಅದನ್ನು ಓದಿ ಎಂದು ಅವರಿಗೆ ಯಾರೂ ಹೇಳಿಲ್ಲ ’ ಎಂದು ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿತು.
ಪುಸ್ತಕವು ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದ ಅರ್ಜಿದಾರರು ಅದನ್ನು ನಿಷೇಧಿಸುವಂತೆ ಕೋರಿದ್ದರು.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವು ಅನಿಯಂತ್ರಿತವಲ್ಲ. ಇತರರ ಭಾವನೆಗಳನ್ನು ಉಲ್ಲಂಘಿಸಲು ಯಾವುದೇ ವ್ಯಕ್ತಿಗೆ ಹಕ್ಕು ಇಲ್ಲ. ಅದು ಸಂವಿಧಾನದ ವಿಧಿ 19ನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಉಚ್ಚ ನ್ಯಾಯಾಲಯದಲ್ಲಿ ವಾದಿಸಿದರು.
ವಿಷಯವು ಪುಸ್ತಕದಲ್ಲಿಯ ಉಲ್ಲೇಖವೊಂದಕ್ಕೆ ಸಂಬಂಧಿಸಿದೆಯೇ ಹೊರತು ಇಡೀ ಪುಸ್ತಕಕ್ಕಲ್ಲ ಎಂದು ಅರ್ಜಿದಾರರಿಗೆ ತಿಳಿಸಿದ ನ್ಯಾಯಾಲಯವು,ನೀವು ಪ್ರಕಾಶಕರ ಪರವಾನಿಗೆಯನ್ನು ರದ್ದುಗೊಳಿಸಬೇಕೆಂದು ಬಯಸಿದ್ದರೆ ಅದು ಬೇರೆ ವಿಷಯ. ಕೇವಲ ಉಲ್ಲೇಖವೊಂದನ್ನು ಮಾತ್ರ ನಮ್ಮ ಮುಂದಿರಿಸಲಾಗಿದೆ. ಇಡೀ ಪುಸ್ತಕವನ್ನಲ್ಲ ’ಎಂದು ಹೇಳಿತು.